ಸಿರುಗುಪ್ಪ | ಸಿರಿಗೇರಿ ಕ್ರಾಸ್ನಲ್ಲಿ ಬಸ್ ನಿಲುಗಡೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಸಿರುಗುಪ್ಪ: ತಾಲ್ಲೂಕಿನ ಸಿರಿಗೇರಿ ಕ್ರಾಸ್ನಲ್ಲಿ ಸಾರಿಗೆ ಬಸ್ಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಶಾಲಾ–ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಕರೂರು, ದರೂರು, ಎಚ್. ಹೊಸಳ್ಳಿ ಹಾಗೂ ಸಿರಿಗೇರಿ ಭಾಗದ ಗ್ರಾಮಗಳಿಂದ ಬಳ್ಳಾರಿ, ಸಿರುಗುಪ್ಪ ಮತ್ತು ತೆಕ್ಕಲಕೋಟೆಗೆ ವ್ಯಾಸಂಗಕ್ಕಾಗಿ ತೆರಳುವ ನೂರಾರು ವಿದ್ಯಾರ್ಥಿಗಳು ಸಿರಿಗೇರಿ ಕ್ರಾಸ್ನಿಂದ ಬಸ್ಗಳನ್ನು ಅವಲಂಬಿಸಿದ್ದಾರೆ. ಆದರೆ, ಕೆಲವು ಬಸ್ಗಳು ಇಲ್ಲಿ ನಿಲುಗಡೆ ನೀಡದೆ ತೆರಳುತ್ತಿರುವುದರಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ. ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ದೊರೆಯದ ಕಾರಣ ತರಗತಿಗಳಿಗೆ ಹಾಜರಾಗಲು ವಿಳಂಬವಾಗುತ್ತಿದ್ದು, ಇದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಬೆಳಿಗ್ಗೆ ಮತ್ತು ಸಂಜೆ ಶಾಲಾ–ಕಾಲೇಜುಗಳ ಸಮಯಕ್ಕೆ ಅನುಗುಣವಾಗಿ ಹೆಚ್ಚುವರಿ ಸಾರಿಗೆ ಸೌಲಭ್ಯ ಕಲ್ಪಿಸಬೇಕು. ಸಿರಿಗೇರಿ ಕ್ರಾಸ್ನಲ್ಲಿ ಎಲ್ಲ ಬಸ್ಗಳು ಕಡ್ಡಾಯವಾಗಿ ನಿಲುಗಡೆ ನೀಡುವಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.




