ನ.29ರಂದು ಬಳ್ಳಾರಿಯಲ್ಲಿ ರಾಜ್ಯಮಟ್ಟದ ಬಾಲಕಿಯರ ಕರಾಟೆ ಪಂದ್ಯಾವಳಿ : ಕಟ್ಟೇಸ್ವಾಮಿ

ಬಳ್ಳಾರಿ: ಬಾಲಕಿಯರಲ್ಲಿ ಆತ್ಮವಿಶ್ವಾಸ ಮತ್ತು ಆತ್ಮರಕ್ಷಣೆಯ ಅರಿವು ಮೂಡಿಸುವುದರ ಜೊತೆಗೆ, ಕರಾಟೆ ಕ್ರೀಡೆಯಲ್ಲಿನ ಅವರ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ನ.29ರಂದು ರಾಜ್ಯಮಟ್ಟದ ಬಾಲಕಿಯರ ಕರಾಟೆ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಟ್ಟೇಸ್ವಾಮಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನಗರದ ರೆಸಿಡೆನ್ಶಿಯಲ್ ಶಾಲೆ ಮತ್ತು ಕಾಲೇಜಿನ ಆವರಣದಲ್ಲಿರುವ ಕಲಾಕ್ಷೇತ್ರ ಸಭಾಂಗಣದಲ್ಲಿ ರಾಜ್ಯ ಕರಾಟೆ ಶಿಕ್ಷಕರ ಸಂಘ ಹಾಗೂ ಜಿಲ್ಲಾ ಘಟಕದ ಸಹಯೋಗದಲ್ಲಿ ಪಂದ್ಯಾವಳಿ ನಡೆಯಲಿದೆ. ನ.29ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ‘ನಾರಿ ಶಕ್ತಿ’ ಹೆಸರಿನಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 700ರಿಂದ 800ಕ್ಕೂ ಹೆಚ್ಚು ಬಾಲಕಿಯರು ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಅಧ್ಯಕ್ಷ ಮುಹಮ್ಮದ್ ನದೀಮ್, ಉಪಾಧ್ಯಕ್ಷ ಮೌನೇಶ್ ವಡ್ಡಟಿ, ಸಹ ಕಾರ್ಯದರ್ಶಿ ಪ್ರಕಾಶ್ ಉಜಿನಿಕೊಪ್ಪ, ರಾಜ್ಯ ತಾಂತ್ರಿಕ ನಿರ್ದೇಶಕ ರವಿ ಕೋಟ್ಯಾನ್ ಹಾಗೂ ಜಿಲ್ಲಾಧ್ಯಕ್ಷ ಸುರೇಶ್ ಉಪಸ್ಥಿತರಿದ್ದರು.




