Kampli | ಮಳೆ ಪ್ರಮಾಣ ಗಮನದಲ್ಲಿಟ್ಟುಕೊಂಡು ರೈತರು ಅತಿ ಜಾಗೃತೆಯಿಂದ ಬೆಳೆ ಆಯ್ಕೆ ಮಾಡಿಕೊಳ್ಳಿ: ತಹಶೀಲ್ದಾರ್ ಜೂಗಲ್ ಮಂಜುನಾಯಕ

ಬಳ್ಳಾರಿ / ಕಂಪ್ಲಿ: ಈ ಬಾರಿಯ ಮುಂಗಾರು ಮಳೆಗಳು ವಾಡಿಕೆಯಿಂದ ಕಡಿಮೆಯಾಗಿದ್ದು, ರೈತರು ಮಿಶ್ರ ಬೆಳೆಗಳತ್ತಾ ಮುಖ ಮಾಡಬೇಕು. ಮತ್ತು ಇರುವ ಅಲ್ಪಸ್ವಲ್ಪ ನೀರಿನ ಲಭ್ಯತೆಯ ಆಧಾರದ ಮೇಲೆ ಬೆಳೆಗಳನ್ನು ಬೆಳೆಯಬೇಕು ಎಂದು ತಹಶೀಲ್ದಾರ್ ಜೂಗಲ್ ಮಂಜುನಾಯಕ ಹೇಳಿದರು.
ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ತಾಲೂಕು ಆಡಳಿತ, ಕೃಷಿ ಇಲಾಖೆ ಸಹಯೋಗದಲ್ಲಿ 2026-27ನೇ ಸಾಲಿನ ಆತ್ಮ ಯೋಜನೆಯಡಿ ಬೆಳೆ ವಿಮೆ, ಪರ್ಯಾಯ ಬೆಳೆ ಪದ್ಧತಿ, ಬರಗಾಲ ನೀರಿನ ಕ್ರಮಗಳ ಕುರಿತು ತರಬೇತಿ ಕಾರ್ಯಗಾರ ಹಾಗೂ ರೈತ ಮತ್ತು ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಮಾನದ ಮಳೆ ಪ್ರಮಾಣ ಗಮನದಲ್ಲಿಟ್ಟುಕೊಂಡು ರೈತರು ಮುಂದಿನ ಬೆಳೆ ಬೆಳೆಯಲು ಅತಿ ಜಾಗೃತಕತೆಯಿಂದ ಆಯ್ಕೆ ಮಾಡಿಕೊಳ್ಳುವುದು ತುಂಬ ಉತ್ತಮವಾಗಿದೆ. ನೀರಿನ ಲಭ್ಯತೆ ತಕ್ಕಂತೆ ಪರ್ಯಾಯ ಬೆಳೆಗಳನ್ನು ಬೆಳೆದು, ರೈತರು ತಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದರು.
ನಂತರ ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಎಂ.ಬಿ.ರವಿ ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಬರಗಾಲದ ಮುನ್ಸೂಚನೆ ಕಂಡು ಬರುತ್ತಿದೆ. ಆದ್ದರಿಂದ ಅನ್ನದಾತರು ಪ್ರಸ್ತುತ ವಾತಾವರಣಕ್ಕೆ ತಕ್ಕಂತೆ ಬರ ನಿರೋಧಕ ಶಕ್ತಿ ಹೊಂದಿರುವ ಹಾಗೂ ಅಲ್ಪಾವಧಿ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಬರೀ ಭತ್ತ ನಾಟಿ ಮಾಡುವ ಬದಲು ಕೂರಿಗೆ ಬಿತ್ತನೆ ಕಡೆಗೆ ರೈತರು ಮುಖ ಮಾಡಬೇಕಾಗಿದೆ. ಇದರಲ್ಲಿ ಅತಿ ಹೆಚ್ಚಾಗಿ ಬೀಜೋಪಚಾರ ಅತಿ ಮುಖ್ಯವಾಗಿದೆ. ರೈತರ ಜಮೀನುಗಳಲ್ಲಿ ಅಂತರ ಬೇಸಾಯ ಪದ್ಧತಿಯನ್ನು ಹೆಚ್ಚಿಸಿಕೊಳ್ಳಬೇಕು. ಕೀಟನಾಶಕ ಮತ್ತು ರಾಸಾಯನಿಕ ಬಳಕೆ ಕಡಿಮೆ ಮಾಡಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ರೆಡ್ಡಿ ಮಾತನಾಡಿ, ನೀರಿನ ಅವಶ್ಯಕತೆಗೆ ತಕ್ಕಂತೆ ಅಲ್ಪಾವಧಿ ಬೆಳೆಗಳನ್ನು ಬೆಳೆಯಬೇಕು. ಕೃಷಿ ಹೊಂಡ, ಬದು ನಿರ್ಮಾಣದ ಮೂಲಕ ಅಂತರ್ಜಲ ಹೆಚ್ಚಿಸಿಕೊಳ್ಳಬೇಕು. ಫಸಲ್ ಭೀಮಾ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿ ಚೇತನ್ ಕುಮಾರ, ಕೃಷಿ ಅಧಿಕಾರಿ ಜ್ಯೋತಿ, ಕೃಷಿಕ ಸಮಾಜದ ಅಧ್ಯಕ್ಷ ವಿಪ್ರದ ನಾರಾಯಣಪ್ಪ, ರೈತ ಸಂಘದ ಅಧ್ಯಕ್ಷ ತಿಮ್ಮಪ್ಪ ನಾಯಕ, ಜಿಲ್ಲಾ ಪ್ರತಿನಿಧಿ ದೊಡ್ಡಬಸಪ್ಪ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಎಸ್.ರೇಣುಕಾರಾಜ್, ಮುಖಂಡರಾದ ಡಿ.ಮುರಾರಿ ಸೇರಿದಂತೆ ಅಧಿಕಾರಿಗಳು ರೈತರು, ಸಿಬ್ಬಂದಿ ಇದ್ದರು.






