Kampli | ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರಕ್ಕೆ ಶ್ರಮಿಸಲಾಗುವುದು: ಹನುಮಂತಪ್ಪ

ಬಳ್ಳಾರಿ / ಕಂಪ್ಲಿ: ಶಿಕ್ಷಣದಲ್ಲಿ ಸಾವಿರಾರು ಸಮಸ್ಯೆಗಳಿದ್ದು, ಇಂತಹ ಸಮಸ್ಯೆಗಳಿಗೆ ಒಗ್ಗಟ್ಟಿನೊಂದಿಗೆ ಹೋರಾಟದ ಮೂಲಕ ಬಗೆಹರಿಸಿಕೊಳ್ಳುವ ಜೊತೆಗೆ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ, ಈಡೇರಿಸಲು ನಿರಂತರವಾಗಿ ಶ್ರಮಿಸಲಾಗುವುದು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿಯ ಕೆರೆ ಶಾಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಛೇರಿಯಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ತಾಲೂಕು ಸಂಘದ ನೂತನ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ಚುನಾವಣಾಧಿಕಾರಿ ನಿಯಮಾನುಸಾಗರವಾಗಿ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಜಾಪ್ರಭುತ್ವದ ಅಡಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿದೆ. ತಾಲೂಕಿನಲ್ಲಿ ಎರಡು ಸಂಘಟನೆಗಳು ಆಗಿರುವುದು ನೋವಿನ ಸಂಗತಿಯಾಗಿದೆ. ನಮ್ಮ ಸಂಘದ ಮೂಲಕ ತಾಲೂಕಿನ ಪ್ರತಿಯೊಬ್ಬ ಶಿಕ್ಷಕರ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಲಾಗುವುದು. ಶಿಕ್ಷಣದಲ್ಲಿ ಸಾವಿರಾರು ಸಮಸ್ಯೆಗಳಿದ್ದು, ಇಂತಹ ಸಮಸ್ಯೆಗಳಿಗೆ ಒಗ್ಗಟ್ಟಿನೊಂದಿಗೆ ಹೋರಾಟದ ಮೂಲಕ ಬಗೆಹರಿಸಿಕೊಳ್ಳಬೇಕಾಗಿದೆ. ಸಂಘವನ್ನು ಉಳಿಸಿ ಬೆಳೆಸೋಣ ಎಂದರು.
ನಂತರ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್.ದೊಡ್ಡಬಸಪ್ಪ ಮಾತನಾಡಿ, ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸುವಲ್ಲಿ ಸಾಕಷ್ಟು ಶ್ರಮಿಸಲಾಗಿದೆ. ಸಂಘ ವಿರೋಧಿ ಚಟುವಟಿಕೆ ಹಿನ್ನಲೆ ಕೆಲ ಶಿಕ್ಷಕರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿದ್ದಾರೆ. ಕೆಲವರು ಮೇಲಾಧಿಕಾರಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದು, ನಾವು ಪ್ರತಿಯೊಂದು ಹಂತದಲ್ಲಿ ಅಧಿಕಾರಿಗಳಿಗೆ ಪ್ರಶ್ನೆ ಮಾಡುವುದರಿಂದ ನಮ್ಮನ್ನು ದೂರ ಮಾಡುತ್ತಿದ್ದಾರೆ. ಯಾವುದೇ ಸ್ಥಾನದಲ್ಲಿದ್ದರೂ ಶಿಕ್ಷಕರ ಯೋಗಕ್ಷೇಮದ ಜೊತೆಗೆ ಅವರ ಕಷ್ಟಗಳಿಗೆ ಸ್ಪಂದಿಸಿ, ಈಡೇರಿಸಲಾಗುವುದು ಎಂದರು.
ತಾಲೂಕು ನೂತನ ಅಧ್ಯಕ್ಷ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ಜಡಿಯಪ್ಪ , ಖಜಾಂಚಿ ಐ.ಗಂಗಮ್ಮ, ಗೌರವಾಧ್ಯಕ್ಷ ಸಿ.ಕೆ.ರಾಮಚಂದ್ರಪ್ಪ, ಉಪಾಧ್ಯಕ್ಷರಾದ ಸುನಿತಾ ಪೂಜಾರ್, ಕೆ.ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಕೆ.ವೀರೇಶ್, ಅಗಳಿ ನಾಗರತ್ನ, ಸಹ ಕಾರ್ಯದರ್ಶಿ ಮಾಲಿಕ್, ಮರಿಸ್ವಾಮಿ ಇವರಿಗೆ ಪ್ರಮಾಣ ಪತ್ರ ನೀಡಿ, ಗೌರವಿಸುವ ಮೂಲಕ ಪದಗ್ರಹಣ ಮಾಡಲಾಯಿತು. ನಂತರ ತಾಲೂಕು ನಾಮ ನಿರ್ದೇಶಕ ಸದಸ್ಯರಾದ ಸುನಿತಾ, ಕೆ.ರಾಜೇಶ್ವರಿ, ಸದಾಶಿವ, ದೊಡ್ಡಬಸಪ್ಪ ಇವರನ್ನು ಗೌರವಿಸಲಾಯಿತು
ಜಿಲ್ಲಾ ಸಂಘದ ನಾಮ ನಿರ್ದೇಶಕರಾದ ವೀರ ಕುಮಾರ್, ಕೆ.ಮಲ್ಲಿಕಾರ್ಜುನ್, ಕರುಣಾಕರಾಚಾರ್, ಕೆ.ಮಲ್ಲಿಕಾರ್ಜುನ, ಕೆ.ಚಿಕ್ಕಜಾಯಿಗನೂರು, ಮೂರ್ತಿ ಇವರನ್ನು ಆಯ್ಕೆ ಮಾಡಿ ಸನ್ಮಾನಿಸಿ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ರಾಜ್ಯ ಸಂಘಕ್ಕೆ ಶ್ರೀತ ರಾಜ ನಾಯಕ್ ರವಿ ಕುಮಾರಣ್ಣ ಆಯ್ಕೆ ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.






