ಬಳ್ಳಾರಿ ಗಂಪು ಘರ್ಷಣೆ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ: ಕೇಂದ್ರ ಸಚಿವ ವಿ.ಸೋಮಣ್ಣ ಆಗ್ರಹ

ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನೀವು ದೇವರಾಜ ಅರಸು ಅವರ ಆಡಳಿತ ಅವಧಿಯನ್ನು ಮೀರಿಸುತ್ತಿದ್ದೀರಿ. ಇಂತಹ ದಿನಗಳಲ್ಲಿ ಈ ಘಟನೆಯಿಂದ ನಿಮ್ಮ ಸರಕಾರಕ್ಕೆ ಕೆಟ್ಟ ಹೆಸರು ಬರುವಂತೆ ಮಾಡಿಕೊಳ್ಳಬೇಡಿ ಎಂಬ ಸಲಹೆಯನ್ನು ಕೇಂದ್ರ ಸಚಿವ ವಿ ಸೋಮಣ್ಣ ನೀಡಿದರು.
ಮಾಜಿ ಸಚಿವ ಜನಾರ್ದನ ರೆಡ್ಡಿಯವರ ನಿವಾಸದ ಮುಂದೆ ಜ.1ರಂದು ರಾತ್ರಿ ನಡೆದಿದ್ದ ಗುಂಡಿನ ದಾಳಿ ಹಾಗೂ ಕಾಂಗ್ರೆಸ್ ನ ಓರ್ವ ಕಾರ್ಯಕರ್ತನ ಹತ್ಯೆ ಪ್ರಕರಣದ ಕುರಿತು ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಬಳ್ಳಾರಿಯಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ವಿ.ಸೋಮಣ್ಣ, ಈ ಘಟನೆಯನ್ನು ಸಿಐಡಿ ತನಿಖೆಗೆ ನೀಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಇದು ಸರಿಯಲ್ಲ. ನೀವು ನ್ಯಾಯಾಧೀಶರಿಂದ ತನಿಖೆ ಮಾಡಿಸದೇ ಇದ್ದರೆ ಸಿಬಿಐಗೆ ನೀಡಿ. ಇಲ್ಲದಿದ್ದರೆ ಬಳ್ಳಾರಿಯಿಂದಲೇ ಅಧಿಕಾರಕ್ಕೆ ಬಂದ ನಿಮಗೆ ನಿಮ್ಮ ಆಡಳಿತಕ್ಕೆ ಕೆಟ್ಟ ಹೆಸರು ಬರಲಿದೆ ಎಂದರು.
ನೀವೇ ದ್ವೇಷ ಭಾಷಣ ನಿಷೇಧ ಕಾಯ್ದೆ ಜಾರಿಗೆ ತಂದಿದ್ದೀರಿ. ಭರತ್ ರೆಡ್ಡಿ ಮೊದಲ ಬಾರಿಗೆ ಶಾಸಕನಾಗಿದ್ದಾನೆ. ಆತನಿಗೆ ಇನ್ನೂ ರಾಜಕೀಯ ನಡವಳಿಕೆ ತಿಳಿದಂತೆ ಇಲ್ಲ. ಬೇಕಿದ್ದರೆ ನನ್ನ ಬಳಿ ಆರು ತಿಂಗಳು ಬಂದರೆ ತರಬೇತಿ ನೀಡುವೆ. ಭರತ್ ರೆಡ್ಡಿ ಯಾವ ಶಾಲೆಯಲ್ಲಿ ಓದಿದ್ದಾನೋ ಗೊತ್ತಿಲ್ಲ. ಆತನ ಮಾತುಗಳಲ್ಲಿ ಸಂಯಮ ಇಲ್ಲ. ದ್ವೇಷದ ಮಾತುಗಳು ಬರುವುದು ಸರಿಯಲ್ಲ ಎಂದು ವಿ ಸೋಮಣ್ಣ ಹೇಳಿದರು.







