ಬಳ್ಳಾರಿ | ಯೂರಿಯಾ ಕೊರತೆ - ಬಿಜೆಪಿ ರೈತ ಘಟಕದಿಂದ ಪ್ರತಿಭಟನೆ

ಬಳ್ಳಾರಿ: ರಾಜ್ಯದ ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಪೂರೈಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಸರಬರಾಜು ಆಗುತ್ತಿರುವ ಬಿತ್ತನೆ ಬೀಜ ಕಳಪೆಯಾಗಿವೆ. ಇಳುವರಿ ಮೇಲೆ ಪೆಟ್ಟು ಬಿದ್ದಿದೆ. ರಾಜ್ಯದಲ್ಲಿ ನಕಲಿ ರಸಗೊಬ್ಬರ ಕಂಪನಿಗಳು ತಲೆ ಎತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ಕೊಟ್ಟು ಬೆಳೆ ಮತ್ತು ಬಿತ್ತನೆ ಮಾದರಿ ಪರಿಶೀಲಿಸಬೇಕಿದ್ದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಬೆಂಗಳೂರು ಮತ್ತು ಮಂಡ್ಯ ಜಿಲ್ಲೆಗೆ ಸೀಮಿತಗೊಂಡಿದ್ದಾರೆ' ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಎಸ್.ಗುರುಲಿಂಗನಗೌಡ ಆರೋಪಿಸಿದರು.
ಗೌಡರೊಂದಿಗೆ ಸಾಥ್ ನೀಡಿದ ಬಿಜೆಪಿ ಕಾರ್ಯಕರ್ತರು ಕೇಂದ್ರ ಸರ್ಕಾರ ಸಮರ್ಪಕವಾಗಿ ನೀಡಿರುವ ರಸಗೊಬ್ಬರವನ್ನು ರಾಜ್ಯ ಸರ್ಕಾರ ರೈತರಿಗೆ ಸರಿಯಾಗಿ ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಯಲ್ ವೃತ್ತದಲ್ಲಿ ಸಮಾವೇಶಗೊಂಡು ಕೆಲವು ಹೊತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ರೈತರಿಗೆ ಬೇಡಿಕೆಯಷ್ಟು ಯೂರಿಯಾ ಗೊಬ್ಬರ ಒದಗಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಕಾಳಸಂತೆಯಲ್ಲಿ ಅದನ್ನು ಮಾರಲಾಗುತ್ತಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ಒದಗಿಸಿರುವ ರಸಗೊಬ್ಬರವನ್ನು ರಾಜ್ಯ ಸರ್ಕಾರ ರೈತರಿಗೆ ಸರಿಯಾಗಿ ಹಂಚಿಕೆ ಮಾಡುತ್ತಿಲ್ಲವೆಂದು ರಾಯಲ್ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಯಲ್ ವೃತ್ತದಿಂದ ಹಳೇ ತಾಲೂಕು ಕಛೇರಿ ಅವರಣದಲ್ಲಿರುವ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿಯವರೆಗೆ ಪಕ್ಷದ ಕಾರ್ಯಕರ್ತರೊಂದಿಗೆ ಆಗಮಿಸಿದ ಎಸ್.ಗುರುಲಿಂಗನಗೌಡರು, ಕಳೆದೆರಡು ವರ್ಷಗಳಲ್ಲಿ ರಾಜ್ಯದ ವಿವಿಧೆಡೆ ಶೇ ೩೦ ರಿಂದ ೪೦ ರಷ್ಟು ಮಳೆ ಕೊರತೆಯಾಗಿತ್ತು. ಆಗ ಯೂರಿಯಾ ಗೊಬ್ಬರಕ್ಕೆ ಬೇಡಿಕೆಯೂ ಕಡಿಮೆ ಇತ್ತು. ಈ ವರ್ಷ ಮುಂಗಾರು ಪೂರ್ವ ಮತ್ತು ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದೆ. ರೈತರು ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯೂರಿಯಾ ದುರುಪಯೋಗಪಡಿಸಿಕೊಂಡು ಕಾಳಸಂತೆಯಲ್ಲಿ ಮಾರುತ್ತಿರುವುದು ಬಹಿರಂಗವಾಗಿದೆ ದೂರಿದರು.
ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ರೈತರಿಗೆ ಅನ್ಯಾಯವಾಗುತ್ತಿದೆ. ರೈತರ ಕಲ್ಯಾಣಕ್ಕಾಗಿ ಹಿಂದಿನ ಬಿಜೆಪಿ ಸರ್ಕಾರ ರೂಪಿಸಿದ್ದ ರೈತ ವಿದ್ಯಾನಿಧಿ ಯೋಜನೆ, ಕೃಷಿ ಉಪಕರಣಗಳಿಗೆ ಸಬ್ಸಿಡಿ ಮತ್ತು ರಾಗಿ ಕೃಷಿಗೆ ಬೆಂಬಲ ಬೆಲೆ ಮತ್ತಿತರ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರ ತನ್ನ ಪಾಲು ಕೊಡುತ್ತಿಲ್ಲ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಗಣಪಾಲ ಐನಾಥ ರೆಡ್ಡಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ದಿವಾಕರ್, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ವಿ.ರಾಮಚಂದ್ರಪ್ಪ, ಉರುಕುಂದ, ಓಬಳೇಶ್, ಮಹೇಶ್ವರಸ್ವಾಮಿ, ಉಜ್ವಲ, ಕಮ್ಮರಚೇಡು ಅಂಜಿ, ಭೋಜರಾಜ, ಸುಗುಣ, ಅಲುವೇಲಮ್ಮ ಸೇರಿದಂತೆ ಹಲವಾರು ರೈತರು, ಬಿಜೆಪಿ ಮುಖಂಡರು ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.







