ಸಂತ್ರಸ್ತೆ ಹೆಸರು ಬಹಿರಂಗಪಡಿಸಿದ ಆರೋಪ : ಶ್ರೀರಾಮುಲು ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲು

ಬಿ.ಶ್ರೀರಾಮುಲು
ಬಳ್ಳಾರಿ: ಪೋಕ್ಸೊ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ವಿರುದ್ಧ ಬಳ್ಳಾರಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಹಾಗೂ ಬಾಲ ನ್ಯಾಯ ಕಾಯ್ದೆಯಡಿ ಜ.18ರಂದು ಪ್ರಕರಣ ದಾಖಲಿಸಲಾಗಿದೆ.
ಬಳ್ಳಾರಿಯಲ್ಲಿ ಜ.1ರಂದು ನಡೆದ ಘರ್ಷಣೆ ಹಾಗೂ ಕೊಲೆ ಘಟನೆಯನ್ನು ಖಂಡಿಸಿ ಬಿಜೆಪಿ ಪಕ್ಷವು ಜ.17ರಂದು ಬಳ್ಳಾರಿಯ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಿತ್ತು. ಈ ಸಮಾವೇಶದಲ್ಲಿ ಭಾಷಣ ಮಾಡುವ ವೇಳೆ ಶ್ರೀರಾಮುಲು ಅವರು ಪೋಕ್ಸೊ ಸಂತ್ರಸ್ತೆಯೊಬ್ಬರ ಗುರುತನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.
ಬಳ್ಳಾರಿಯ ಎಪಿಎಂಸಿ ಠಾಣೆ ಸಿಪಿಐ ಮುಹಮ್ಮದ್ ರಫೀಕ್ ಎಂಬುವರು ನೀಡಿದ ದೂರಿನ ಮೇರೆಗೆ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ವಿರುದ್ಧ ಬಳ್ಳಾರಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಮತ್ತು ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಫೋಕ್ಸೋ ಕಾಯ್ದೆ ಪ್ರಕಾರ ಯಾವುದೇ ಕಾರಣಕ್ಕೂ ನೊಂದ ಬಾಲಕಿ ಹೆಸರು, ವಿವರ ಬಹಿರಂಗಪಡಿಸುವಂತಿಲ್ಲ. ಒಂದು ವೇಳೆ ಸಂತ್ರಸ್ತೆ ಹೆಸರು ಬಹಿರಂಗಪಡಿಸಿದರೆ ಇಂತಹ ಪ್ರಕರಣದಲ್ಲಿ 6 ತಿಂಗಳು ಜೈಲುವಾಸ ಮತ್ತು 2 ಲಕ್ಷ ರೂ.ವರೆಗೆ ದಂಡ ಹಾಕುವ ಸಾಧ್ಯತೆ ಇರುತ್ತದೆ.







