ಕಂಪ್ಲಿಯಲ್ಲಿ ವಿಶ್ವಕರ್ಮೋತ್ಸವ: ಭವ್ಯ ಮೆರವಣಿಗೆ, ಸಮುದಾಯ ಭವನ ಲೋಕಾರ್ಪಣೆ

ಕಂಪ್ಲಿ: ಪಟ್ಟಣದ ಕೊಟ್ಟಾಲ್ ರಸ್ತೆಯ ಸತ್ಯನಾರಾಯಣ ದೇವಸ್ಥಾನದಿಂದ ಕಾಳಿಕಾ ಕಮಠೇಶ್ವರ ದೇವಸ್ಥಾನದವರೆಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಭಾವಚಿತ್ರ ಹಾಗೂ ಪೂಜ್ಯ ಶ್ರೀಗಳ ಭವ್ಯ ಮೆರವಣಿಗೆಯು ಶುಕ್ರವಾರ ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿತು.
ವಿಶ್ವಕರ್ಮ ಸಮಾಜದ ನೂತನ ಸಮುದಾಯ ಭವನ ಹಾಗೂ ಶ್ರೀ ಡಿ.ವೀರಪ್ಪ ಆಚಾರ್ ಕಲ್ಯಾಣ ವೇದಿಕೆಯ ಉದ್ಘಾಟನಾ ಸಮಾರಂಭದ ಅಂಗವಾಗಿ ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವದ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.
ಮಾರ್ಗದುದ್ದಕ್ಕೂ ಭಕ್ತಿ ಸಡಗರ:
ಸತ್ಯನಾರಾಯಣ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ಮಹಾತ್ಮಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಗ್ರಾಮ ದೇವತೆ ಮಾರೆಮ್ಮ ದೇವಸ್ಥಾನ, ನಡುವಲ ಮಸೀದಿ ಹಾಗೂ ಗಂಗಾನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿ ಕಾಳಿಕಾ ಕಮಠೇಶ್ವರ ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ಮೆರವಣಿಗೆಯ ಸಾಗುವ ಹಾದಿಯಲ್ಲಿ ಸಮಾಜದ ಬಂಧುಗಳು ಭಕ್ತಿಯಿಂದ ಶ್ರೀಗಳಿಗೆ ಹಾಗೂ ವಿಶ್ವಕರ್ಮ ಭಾವಚಿತ್ರಕ್ಕೆ ನಮಿಸಿದರು. ಮುಂಜಾನೆ ವಿಶ್ವಕರ್ಮ ಧ್ವಜಾರೋಹಣ, ಚಂಡಿಕಾ ಯಾಗ ಹಾಗೂ ಪೂರ್ಣಾಹುತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದವು.
ದಿವ್ಯ ಸಾನಿಧ್ಯ ಹಾಗೂ ಉದ್ಘಾಟನೆ:
ವಿಶ್ವಕರ್ಮ ಪೀಠದ ಪರಮಪೂಜ್ಯ ಸುಜ್ಞಾನತೀರ್ಥ ಮಹಾಸ್ವಾಮಿಗಳು ಹಾಗೂ ಆನೆಗುಂದಿಯ ಪಂಚ ಸಿಂಹಾಸನ ಸರಸ್ವತಿ ಪೀಠದ ಕಾಳ ಹಸ್ತೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನ ಮೂರ್ತಿ ಪಿ ಅವರು ನೂತನ ಸಮುದಾಯ ಭವನವನ್ನು ಉದ್ಘಾಟಿಸಿ ಶುಭ ಕೋರಿದರು. ಕಂಪ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ರುದ್ರಪ್ಪ ಆಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಮಂಟೇ ಲಿಂಗಾಚಾರ್, ವಿಜಯನಗರ ಜಿಲ್ಲಾಧ್ಯಕ್ಷ ಸಿ.ರಾಜಣ್ಣ, ಕೊಪ್ಪಳ ಜಿಲ್ಲಾಧ್ಯಕ್ಷ ವಾಗೇಶ್ ಕುಮಾರ, ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಡಿ.ವೀಣಾ, ಉಪಾಧ್ಯಕ್ಷ ಚಂದ್ರಶೇಖರ ಆಚಾರ್, ಪ್ರಧಾನ ಕಾರ್ಯದರ್ಶಿ ಡಿ.ಮೌನೇಶ್, ಕರ್ನಾಟಕ ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾ, ಮುಖಂಡರಾದ ಡಿ.ರಾಘವೇಂದ್ರ ಆಚಾರ್, ಉಮಾದೇವಿ ಹೊಸಪೇಟೆ ಸೇರಿದಂತೆ ನೂರಾರು ಭಕ್ತರು ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.






