ಸಂಡೂರಿನಲ್ಲಿ ವಿಶ್ವ ಪರಿಸರ ದಿನಾಚರಣೆ : ಹಸಿರು ಸಂರಕ್ಷಣೆಗೆ ಶಾಸಕಿ ಅನ್ನಪೂರ್ಣ ತುಕಾರಾಂ ಕರೆ
ಸಂಡೂರು: ವಿಶ್ವ ಪರಿಸರ ದಿನಾಚರಣೆ–2026ರ ಅಂಗವಾಗಿ ಸಂಡೂರು ಉತ್ತರ ಹಾಗೂ ದಕ್ಷಿಣ ವಲಯ ಮತ್ತು ಸಂಡೂರು ಸಾಮಾಜಿಕ ಅರಣ್ಯ ವಲಯದ ವತಿಯಿಂದ ಎಂ. ತುಂಬರಗುದ್ದಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ, ಅರಣ್ಯ ಸಿಬ್ಬಂದಿಗಳ ಸನ್ಮಾನ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಡೂರು ಕ್ಷೇತ್ರದ ಶಾಸಕಿ ಅನ್ನಪೂರ್ಣ ತುಕಾರಾಂ ಪರಿಸರ ಸಂರಕ್ಷಣೆ, ಅರಣ್ಯ ಸಂಪತ್ತಿನ ಅಭಿವೃದ್ಧಿ ಹಾಗೂ ಹಸಿರು ಪರಿಸರ ನಿರ್ಮಾಣದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದರು.
“ಪ್ರಕೃತಿ ದೈವದಂತಿದ್ದು, ಅದನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ವಿದ್ಯಾರ್ಥಿಗಳು ಒಂದೊಂದು ಗಿಡವನ್ನು ದತ್ತು ಪಡೆದು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು” ಎಂದು ಅವರು ಕರೆ ನೀಡಿದರು.
ಇದಕ್ಕೂ ಮುನ್ನ ಪಿಆರ್‌ಇಡಿ ಯೋಜನೆಯಡಿ 33 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಎರಡು ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಲಾಯಿತು. ಜೊತೆಗೆ 61.46 ಲಕ್ಷ ರೂ. ವೆಚ್ಚದ ನಾಲ್ಕು ಹೊಸ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಹಾಗೂ ಕೆಆರ್‌ಐಡಿಎಲ್ ಯೋಜನೆಯಡಿ 45.61 ಲಕ್ಷ ರೂ. ವೆಚ್ಚದ ನಾಲ್ಕು ಕೊಠಡಿಗಳ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ನಿರ್ಮಾಣಗೊಂಡ ನಾಲ್ಕು ನೂತನ ಕೊಠಡಿಗಳನ್ನು ಉದ್ಘಾಟಿಸಿದ ಶಾಸಕರು, ಎಸ್‌ಡಿಎಂಸಿ ವತಿಯಿಂದ 1 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ “ಡಾ. ಬಿ.ಆರ್. ಅಂಬೇಡ್ಕರ್ ಗ್ರಂಥಾಲಯ”ವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ಪಠ್ಯ ಶಿಕ್ಷಣದ ಜೊತೆಗೆ ಸಾಹಿತ್ಯ ಮತ್ತು ಸ್ಪರ್ಧಾತ್ಮಕ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿಯರಾದ ಕಾವ್ಯ, ಪುಷ್ಪವತಿ ಹಾಗೂ ಕಲ್ಪನಾ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಯಶಸ್ಸಿಗೆ ಪಾಲಕರು ನಿರಂತರ ಬೆಂಬಲ ನೀಡಬೇಕು ಎಂದು ಶಾಸಕರು ತಿಳಿಸಿದರು.
ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಸಮ್ಮದ್ ಕೊಟ್ಟೂರು, ಸಂಡೂರು ಪ್ರದೇಶದ ಅಪರೂಪದ ಸಸ್ಯ ಸಂಪತ್ತಿನ ಕುರಿತು ಮಾಹಿತಿ ನೀಡಿ, ಕೊರೊನಾ ಸಂದರ್ಭದಲ್ಲಿ ಆಮ್ಲಜನಕದ ಮಹತ್ವ ಅರಿತಿರುವ ನಾವು ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ತಹಶೀಲ್ದಾರ್ ಅನಿಲ್ ಕುಮಾರ್ ಮಾತನಾಡಿ, ಕಳೆದ ವರ್ಷ 55 ಸಾವಿರ ಸಸಿಗಳನ್ನು ನೆಡಲಾಗಿದ್ದು, ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಡುವ ಗುರಿಯೊಂದಿಗೆ ಮಿಯಾವಾಕಿ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ವಿವಿಧ ಹಂತದ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ, ವಸತಿ ನಿಲಯ, ಕೆಪಿಎಸ್ ಯೋಜನೆಯಡಿ ಪದವಿ ಪೂರ್ವ ಕಾಲೇಜು, ಗಣಿತ ಪ್ರಯೋಗಾಲಯ ಹಾಗೂ ವಿಜ್ಞಾನ ಥೀಮ್ ಪಾರ್ಕ್ ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳನ್ನು ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಶಾಸಕರ ಮುಂದಿಟ್ಟರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಅರಣ್ಯಾಧಿಕಾರಿ ದಾದಾ ಖಲಂದರ್, ಶಾಲಾ ಮುಖ್ಯಗುರು ಅಮರೇಶ್ ಸೊನ್ನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.








