BENGALURU | ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಕ್ ಪಾರ್ಟಿ: ಶಿರಸ್ತೇದಾರ ವಿರುದ್ಧ ದೂರು

ಬೆಂಗಳೂರು, ಮಾ.5: ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರಕಾರಿ ಅಧಿಕಾರಿಯೊಬ್ಬರು ಜನ್ಮದಿನ ಆಚರಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ರಾಷ್ಟ್ರೀಯ ಅಂಬೇಡ್ಕರ್ ಸೇನೆ ಕಂದಾಯ ಸಚಿವರಿಗೆ ದೂರು ಸಲ್ಲಿಸಿದೆ.
ಶಿರಸ್ತೇದಾರ ಎಚ್.ಆರ್.ಅನಿಲ್ ಕುಮಾರ್ ಎಂಬವರು, ಸಹಪಾಠಿಗಳ ಜೊತೆ ಟೇಬಲ್ ಮೇಲೆ 10 ಕೇಕ್ ಗಳನ್ನು ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಸರಕಾರಿ ಕಚೇರಿಗಳಲ್ಲಿ ಸರಕಾರಿ ಸಿಬ್ಬಂದಿ ಮತ್ತು ಅಧಿಕಾರಿಗಳು ಜನ್ಮದಿನ ಆಚರಿಸಬಾರದು ಎಂಬ ನಿಯಮ ಇದೆ. ಆದರೆ, ಈ ನಿಯಮ ಉಲ್ಲಂಘಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿ ಹುಟ್ಟಹಬ್ಬ ಆಚರಿಸಿದ್ದರೂ ಕಂದಾಯ ಇಲಾಖೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಇತ್ತೀಚಿಗಷ್ಟೇ ಲೋಕೋಪಯೋಗಿ ಇಲಾಖೆಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದವರನ್ನು ಅಮಾನತುಗೊಳಿಸಿ ಸರಕಾರಿ ಆದೇಶ ಹೊರಡಿಸಿತ್ತು. ಶಿರಸ್ತೇದಾರ ತನ್ನ ಹುಟ್ಟುಹಬ್ಬ ಆಚರಣೆಗೆ ಕಚೇರಿ ಸ್ಥಳವನ್ನು ದುರುಪಯೋಗ ಪಡಿಸಿಕೊಂಡಿರುವುದನ್ನು ವಿರೋಧಿಸಿ ರಾಷ್ಟ್ರೀಯ ಅಂಬೇಡ್ಕರ್ ಸೇನೆ ಕಂದಾಯ ಸಚಿವರಿಗೆ ದೂರು ಸಲ್ಲಿಸಿ ತಕ್ಷಣ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.




