ಪೋಷಕರ ಒಪ್ಪಿಗೆ ಪತ್ರ ಪಡೆದು ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ವಿತರಣೆ: ಮಧು ಬಂಗಾರಪ್ಪ

ಬೆಂಗಳೂರು, ಆ.11 : ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಮಾಡುವ ಸಂಬಂಧ ಪೋಷಕರಿಂದ ಕಡ್ಡಾಯವಾಗಿ ಒಪ್ಪಿಗೆ ಪತ್ರ ಪಡೆದು ತೀರ್ಮಾನ ಮಾಡಲಾಗುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸೋಮವಾರ ವಿಧಾ ನಪರಿಷತ್‌ನಲ್ಲಿ ನಡೆದ ಪ್ರಶೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡುವ ಬಗ್ಗೆ ಆಕ್ಷೇಪಗಳು ಕೇಳಿಬಂದಿವೆ. ಕೆಲವೆಡೆ ಪೋಷಕರೇ ತಮ್ಮ ಮಕ್ಕಳು ಮೊಟ್ಟೆ ತಿನ್ನುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಹೀಗಾಗಿ ಶಾಲಾ ಪ್ರವೇಶವಾದ ತಕ್ಷಣವೇ ವಿದ್ಯಾರ್ಥಿಗಳ ಪೋಷಕರಿಂದ ಮೊಟ್ಟೆ ತಿನ್ನುವ, ಇಲ್ಲವೇ ಬಾಳೆಹಣ್ಣು ತಿನ್ನುವ ಬಗ್ಗೆ ಅನುಮತಿ ಪತ್ರವನ್ನು ಪಡೆಯುತ್ತೇವೆ ಎಂದರು.
ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆ ಇರುವುದರಿಂದ ಮೊಟ್ಟೆ ವಿತರಣೆ ಮಾಡುವಂತೆಯೂ ಶಿಕ್ಷಣ ತಜ್ಞರು ಮತ್ತು ವೈದ್ಯರು ಶಿಫಾರಸು ಮಾಡಿದ್ದಾರೆ ಎಂದರು
ಅಝೀಂ ಪ್ರೇಮ್‌ಜಿ ಅನುದಾನದ ದುರ್ಬಳಕೆ ನಡೆದಿಲ್ಲ: ಅಝೀಂ ಪ್ರೇಮ್‌ಜಿ ಪ್ರತಿಷ್ಠಾನವು ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಯೋಜನೆಗೆ ಅನುದಾನವನ್ನು ನೀಡುತ್ತಿದೆ. ಈ ಅನುದಾನದ ಹಣವನ್ನು ಸಮರ್ಪಕವಾಗಿ ಮಕ್ಕಳಿಗೆ ಬಳಸಲಾಗುತ್ತಿದ್ದು, ಯಾವುದೇ ದುರ್ಬಳಕೆ ನಡೆದಿಲ್ಲ ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.







