ವಿವಿಧ ರಾಜ್ಯಗಳಲ್ಲಿ ಚುನಾವಣಾ ಅಕ್ರಮ ಆರೋಪ | ಚುನಾವಣಾ ಆಯೋಗ ಉತ್ತರಿಸಲಿ: ರಮೇಶ್ ಬಾಬು

ಬೆಂಗಳೂರು, ಆ.12: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಹದೇವಪುರ ಕ್ಷೇತ್ರ ಸೇರಿದಂತೆ ಬಿಹಾರ, ಉತ್ತರ ಪ್ರದೇಶ, ದಿಲ್ಲಿ, ಮಹಾರಾಷ್ಟ್ರ ರಾಜ್ಯಗಳಲ್ಲಿ ನಡೆದಿರುವ ಚುನಾವಣಾ ಅಕ್ರಮಗಳ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದು, ಆಯೋಗವು ಇದಕ್ಕೆ ಉತ್ತರ ನೀಡಬೇಕು ಎಂದು ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಒತ್ತಾಯಿಸಿದ್ದಾರೆ.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ದಾಖಲೆ ಸಮೇತ ಚುನಾವಣಾ ಆಕ್ರಮಗಳನ್ನು, ಆಯೋಗದ ಕರ್ತವ್ಯ ಲೋಪಗಳನ್ನು ದೇಶದ ಮುಂದೆ ಇಟ್ಟಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಚುನಾವಣಾ ಪ್ರಕ್ರಿಯೆ ಬಗ್ಗೆ ಯಾವುದೇ ವ್ಯಕ್ತಿ ಪ್ರಶ್ನೆ ಎತ್ತಿದರೆ ಆಯೋಗ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ರಾಹುಲ್ ಗಾಂಧಿ ಅವರು ‘ವೋಟ್ ಚೋರಿ’ ಅಭಿಯಾನ ಮೂಲಕ ಆಯೋಗದ ಅಕ್ರಮಗಳನ್ನು ದೇಶದ ಜನರ ಗಮನಕ್ಕೆ ತಂದಿದ್ದಾರೆ. ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿ ಅಕ್ರಮಗಳ ಬಗ್ಗೆ ಇದುವರೆಗೂ ಉತ್ತರ ನೀಡಿಲ್ಲ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ನ್ಯಾಯ ನೀಡಲಿದೆ ಎಂಬ ವಿಶ್ವಾಸ ನಮ್ಮಲ್ಲಿದೆ ಎಂದು ಅವರು ತಿಳಿಸಿದರು.
ಆಯೋಗವು ತನ್ನ ವೈಫಲ್ಯಗಳಿಂದಾಗಿ ಚುನಾವಣಾ ವ್ಯವಸ್ಥೆ ಬುಡಮೇಲು ಮಾಡುವ ಕೆಲಸ ಮಾಡುತ್ತಿದೆ. ಇದನ್ನು ಪ್ರಶ್ನೆ ಮಾಡುವವರಿಗೆ ನೋಟಸ್ ನೀಡಿ ಬೆದರಿಕೆ ಹಾಕಲಾಗುತ್ತಿದೆ. ಕಾಂಗ್ರೆಸ್ ನಾಯಕರಿಗೆ ಬೆದರಿಕೆ ಹಾಕುತ್ತಿರುವುದನ್ನು ಹಾಗೂ ಆಯೋಗ ಒಂದು ಪಕ್ಷದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.
ನಾನು ನಿನ್ನೆ ಆಯೋಗಕ್ಕೆ ಪತ್ರ ಬರೆದು ಸಂವಿಧಾನದ 324 ಅಡಿಯಲ್ಲಿ ಅಭಿವ್ಯಕ್ತಿ ಸ್ವಾಂತ್ರ್ಯದ ಹಕ್ಕಿನ ಮೂಲಕ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ರಾಹುಲ್ ಗಾಂಧಿ ಅವರು ಸೇರಿದಂತೆ ವಿರೋಧ ಪಕ್ಷಗಳ ಮೇಲೆ ವ್ಯಕ್ತಪಡಿಸಿರುವ ಆಕ್ಷೇಪಣೆ ಹಿಂಪಡೆಯುವಂತೆ ಆಗ್ರಹಿಸಿದ್ದೇನೆ. ಚುನಾವಣಾ ಲೋಪಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದೇನೆ ಎಂದು ಅವರು ತಿಳಿಸಿದರು.
ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷೆ ಐಶ್ವರ್ಯ ಮಹದೇವ್ ಮಾತನಾಡಿ, ರಾಹುಲ್ ಗಾಂಧಿ ಅವರ ಪ್ರತಿ ಹೆಜ್ಜೆಯನ್ನು ಚುನಾವಣಾ ಆಯೋಗ ತಡೆಯಲು ಪ್ರಯತ್ನಿಸಿದರೂ ರಾಹುಲ್ ಗಾಂಧಿ ಅವರು ಚುನಾವಣಾ ಅಕ್ರಮಗಳನ್ನು ಬಯಲಿಗೆಳೆದಿದ್ದಾರೆ. ಈ ಮತಗಳ್ಳತನ ವಿರುದ್ಧದ ಹೋರಾಟ ಕರ್ನಾಟಕದ ಮಹದೇವಪುರ ಕ್ಷೇತ್ರದಿಂದ ಆರಂಭವಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗದ ಹೊಣೆಗಾರಿಕೆಯನ್ನು ಕೇಳುತ್ತಿದೆ. ತಮ್ಮ ಪ್ರಶ್ನೆಗಳಿಗೆ ಉತ್ತರ ಬಯಸುತ್ತಿದೆ. ಸೋಮವಾರ(ಆ.11) ಇಂಡಿಯಾ ಒಕ್ಕೂಟದ 300 ಸಂಸದರು ಚುನಾವಣಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲು ಹೋಗಲು ನಿರ್ಧರಿಸಿದರೆ, ಅವರನ್ನು ಬಂಧಿಸಲಾಯಿತು. ಸಂಸದರನ್ನು ಬಿಜೆಪಿ ಸರಕಾರ ಈ ರೀತಿ ನಡೆಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ. ಕೇಂದ್ರದ ಈ ನಡೆಯನ್ನು ಖಂಡಿಸಿ ಇದರ ವಿರುದ್ಧ ರಾಷ್ಟ್ರದಾದ್ಯಂತ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದು ಅವರು ತಿಳಿಸಿದರು.







