ದೇವರದಾಸಿಮಯ್ಯರ ಅನುಯಾಯಿಗಳು ಜಾತಿಗಣತಿಯಲ್ಲಿ ‘ಹಟಗಾರ’ ಎಂದು ಬರೆಸಿ : ಘನಲಿಂಗ ಸ್ವಾಮೀಜಿ

ಬೆಂಗಳೂರು, ಆ.29: ರಾಜ್ಯ ಸರಕಾರ ನಡೆಸಲಿರುವ ಜಾತಿಗಣತಿ ಸಮೀಕ್ಷೆ ವೇಳೆ ದೇವರ ದಾಸಿಮಯ್ಯ ಅನುಯಾಯಿಗಳು ಕಡ್ಡಾಯವಾಗಿ ‘ಹಟಗಾರ’ ಜಾತಿ ಎಂದು ನಮೂದಿಸುವಂತೆ ನೇರಲಕೆರೆ ಸಿದ್ದಾರೂಢ ಮಠದ ಘನಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಟಗಾರ ಸಮುದಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮೂಲ ನೇಕಾರ ವೃತ್ತಿಯಲ್ಲಿ ತೊಡಗಿರುವ ಹಟಗಾರರು ಸೇರಿ 19 ಜಾತಿಗಳು ಶೈವ ಸಂಪ್ರದಾಯವನ್ನು ಅನುಸರಿಸುತ್ತಿದ್ದರೂ ಜೇಡರ, ಹಟಗಾರ ನೇಕಾರ, ಹಟಗಾರ ದೇವಾಂಗ ಹೀಗೆ ಭಿನ್ನ ಹೆಸರಿನಲ್ಲಿ ಜಾತಿ ನಮೂದಿಸುತ್ತಿರುವ ಕಾರಣ ಜನಾಂಗದ ಜನಸಂಖ್ಯೆ ಕಡಿಮೆಯಾಗಿ ಸರಕಾರದ ಸವಲತ್ತುಗಳಿಂದ ವಂಚಿತರಾಗುತ್ತಿದ್ದೇವೆ. ಆದ್ದರಿಂದ ಸಮುದಾಯ ಒಗ್ಗಟ್ಟು ಪ್ರದರ್ಶಿಸಬೇಕಾದ ಕಾರಣ ಜನಗಣತಿ ಸಮೀಕ್ಷೆ ವೇಳೆ ಏಕರೂಪದಲ್ಲಿ ಹಟಗಾರ ಎಂದು ನಮೂದಿಸುವಂತೆ ಕೋರಿದರು.
ಕರ್ನಾಟಕ ರಾಜ್ಯ ಹಟಗಾರ ಸಮಾಜದ ಅಧ್ಯಕ್ಷ ಆರ್.ಸಿ.ಘಾಳೆ ಮಾತನಾಡಿ, ಹಟಗಾರ ಸಮುದಾಯ ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ರಾಜ್ಯದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಹಟಗಾರ ಜನಾಂಗವಿದ್ದು ಹೈದ್ರಾಬಾದ್ ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಭಾಗದಲ್ಲಿ ಜನಸಂಖ್ಯೆ ಹೆಚ್ಚಿದೆ. ಮೂಲ ದೇವರ ದಾಸಿಮಯ್ಯ ಅವರ ಅನುಯಾಯಿಗಳಾಗಿದ್ದು ನೇಕಾರಿಕೆ, ಕೈಮಗ್ಗ ವೃತ್ತಿಯನ್ನು ಅವಲಂಬಿಸಿ ಬದುಕುತ್ತಿದ್ದಾರೆ. ಸರಕಾರದ ಸವಲತ್ತುಗಳು ಸಮರ್ಪಕವಾಗಿ ಸಿಗಬೇಕಾದರೆ ಸಮುದಾಯ ಒಗ್ಗಟ್ಟಾಗಿ ಜನಸಂಖ್ಯೆ ಪ್ರಮಾಣವನ್ನು ತೋರಿಸಬೇಕು. ಆ ನಿಟ್ಟಿನಲ್ಲಿ ಜನಾಂಗದವರು ಜಾತಿ ಪಟ್ಟಿಯಲ್ಲಿ ಹಟಗಾರ ಎಂದು ನಮೂದಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಹಟಗಾರ ಸಮಾಜ ಬೆಂಗಳೂರು ಘಟಕದ ಅಧ್ಯಕ್ಷ ಸುರೇಶ ಭದ್ರಣ್ಣನವರ, ಕಲ್ಯಾಣಪ್ಪ ಯಾಳಗಿ ಮತ್ತಿತರರು ಹಾಜರಿದ್ದರು.







