ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಅಳವಡಿಸಲು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಸೂಚನೆ

ಬೆಂಗಳೂರು, ಸೆ.10: ಮಹಿಳೆಯರ ಸುರಕ್ಷತೆಗಾಗಿ ಮೆಜೆಸ್ಟಿಕ್‍ನಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣದ ಎಲ್ಲ ಕಡೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬುಧವಾರದಂದು ನಗರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಮಹಿಳೆಯರಿಗೆ ಇರುವ ಭದ್ರತೆ, ಸುರಕ್ಷತೆ ಹಾಗೂ ಇತರ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮೆಜೆಸ್ಟಿಕ್‍ನಲ್ಲಿರುವ ಬಿಎಂಟಿಸಿ ಬಸ್ ಎಲ್ಲ ನಿಲ್ದಾಣದ ಫ್ಲಾಟ್ ಫಾರಂಗಳಲ್ಲಿ ಶುದ್ಧ ಕುಡಿಯುವ ನೀರಿನ ಯಂತ್ರಗಳನ್ನು ಅಳವಡಿಸಬೇಕು. ಮುಚ್ಚಿದ ಕಸದ ಬುಟ್ಟಿಗಳನ್ನು ಆಳವಡಿಸಿ ಆದಷ್ಟು ಬೇಗ ಆಯೋಗಕ್ಕೆ ವರದಿ ಕಳುಹಿಸಬೇಕು ಎಂದು ಬಿಎಂಟಿಸಿ ನಿರ್ದೇಶಕರಿಗೆ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗೋವಿಂದರಾಜನಗರ ರೆಫರಲ್ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯರಿಗೆ, ಬಾಣಂತಿಯರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಮಾತ್ರೆ ಹಾಗೂ ಇತರೆ ಔಷಧಿಗಳನ್ನು ಹೊರಗಿನ ಮೆಡಿಕಲ್ ಸ್ಟೋರ್‍ಗಳಲ್ಲಿ ತರುವಂತೆ ಚೀಟಿ ನೀಡುತ್ತಿದ್ದು, ಇಂತಹ ಸಮಸ್ಯೆಗಳನ್ನು ಒಂದು ವಾರದಲ್ಲಿ ಬಗೆಹರಿಸಿ ವರದಿ ಕಳುಹಿಸಬೇಕು ಎಂದು ಆಸ್ಪತ್ರೆಯ ಅಧೀಕ್ಷಕರಿಗೆ ಅವರು ಸೂಚನೆ ನೀಡಿದರು.





