ಪರಿಷ್ಕೃತ ವಸ್ತ್ರ ಸಂಹಿತೆಯ ಆದೇಶ ಸ್ವಾಗತಿಸಿದ ಬ್ಯಾರಿಸ್ ಸೆಂಟ್ರಲ್ ಕಮಿಟಿ

ಬೆಂಗಳೂರು : ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಹಕ್ಕುಗಳನ್ನು ಗೌರವಿಸುವ ದಿಸೆಯಲ್ಲಿ ಸರಕಾರ ಹೊರಡಿಸಿರುವ ಪರಿಷ್ಕೃತ ವಸ್ತ್ರ ಸಂಹಿತೆಯ ಆದೇಶ ಸ್ವಾಗತಾರ್ಹವಾಗಿದೆ ಎಂದು ಬ್ಯಾರಿಸ್ ಸೆಂಟ್ರಲ್ ಕಮಿಟಿ (ಬಿಸಿಸಿ)ಯ ಅಧ್ಯಕ್ಷ ಶಬೀರ್ ಬ್ರಿಗೇಡ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬ್ಯಾರಿಸ್ ಸೆಂಟ್ರಲ್ ಕಮಿಟಿಯು ಬೆಂಗಳೂರಿನಲ್ಲಿ ಫೆ.1ರಂದು ಹಮ್ಮಿಕೊಂಡಿದ್ದ ಬ್ಯಾರಿ ಕೂಟಕ್ಕೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಧಾರ್ಮಿಕ ಪದ್ಧತಿಗೆ ಅನುಗುಣವಾದ ವಸ್ತ್ರಗಳನ್ನು ಶಾಲಾ ಕಾಲೇಜುಗಳಲ್ಲಿ ಧರಿಸಲು ಸರಕಾರ ಅನುವು ಮಾಡಿಕೊಡಬೇಕೆಂದು ಮನವಿ ಮಾಡಲಾಗಿತ್ತು. ಈಗ ನಮ್ಮ ಮನವಿಗೆ ಸ್ಪಂದನೆ ದೊರಕಿರುವುದು ಖುಷಿ ತಂದಿದೆ ಎಂದರು.
ಸಾಂಪ್ರದಾಯಿಕ ಅಥವಾ ಧಾರ್ಮಿಕ ಸಂಕೇತಗಳನ್ನು ಧರಿಸಿರುವ ಕಾರಣಕ್ಕೆ ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ಸಂಸ್ಥೆ, ತರಗತಿ ಕೊಠಡಿ, ಪರೀಕ್ಷಾ ಕೇಂದ್ರ ಅಥವಾ ಇತರ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿರಾಕರಿಸಬಾರದು ಎಂಬ ರಾಜ್ಯ ಸರಕಾರದ ಸ್ಪಷ್ಟ ಸೂಚನೆಯು ಸಮಾನತೆ ಮತ್ತು ಶಿಕ್ಷಣದ ಹಕ್ಕನ್ನು ಬಲಪಡಿಸುತ್ತದೆ ಎಂದು ಅವರು ತಿಳಿಸಿದರು.
ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಕಾನೂನು ಸಲಹೆಗಾರ ಅಡ್ವೊಕೇಟ್ ಖಲಂದರ್ ಕೊಯಿಲ ಮಾತನಾಡಿ, ಸಂವಿಧಾನದ ಆಶಯವಾಗಿರುವ ಸರ್ವಧರ್ಮ, ಸಮಭಾವದ ಆಶಯಕ್ಕೆ ಅನುಗುಣವಾಗಿಯೇ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಪರಿಷ್ಕೃತ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಜಾತಿ, ಧರ್ಮಗಳ ಆಧಾರದಲ್ಲಿ ಸಮಾಜವನ್ನು ಒಡೆಯುವ ಕೆಲಸ ಆಗಬಾರದು. ಸೌಹಾರ್ದತೆ ಇದ್ದಾಗ ಮಾತ್ರ ನಮ್ಮ ದೇಶವು ಮುಂದುವರಿಯಲು ಸಾಧ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಸಿಸಿ ಉಪಾಧ್ಯಕ್ಷ ಗಫೂರ್, ಕಾರ್ಯದರ್ಶಿ ನಾಸಿರ್ ಕೆಂಪಿ, ಮಾಧ್ಯಮ ವಿಭಾಗದ ಬಶೀರ್ ಅಡ್ಯನಡ್ಕ ಹಾಗೂ ಇರ್ಷಾದ್ ವೇಣೂರು ಉಪಸ್ಥಿತರಿದ್ದರು.






