ಆನ್ಲೈನ್ ಗೇಮ್ಗಳ ಹೆಸರಿನಲ್ಲಿ ವಂಚನೆ: ಕ್ರಿಮಿನಲ್ ದೂರು ದಾಖಲಿಸಿದ ಈಡಿ

ಸಾಂದರ್ಭಿಕ ಚಿತ್ರ | Photo Credit : PTI
ಬೆಂಗಳೂರು : ಆನ್ಲೈನ್ ಗೇಮ್ಗಳ ಹೆಸರಿನಲ್ಲಿ ಜನರಿಗೆ ಹಣ ವಂಚನೆ ಮಾಡಿರುವ ಆರೋಪದ ಮೇಲೆ ಗೇಮ್ಕ್ರಾಫ್ಟ್ ಟೆಕ್ನಾಲಜೀಸ್, ರಮ್ಮಿ ಟೈಮ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕರು ಮತ್ತು ನಿರ್ದೇಶಕರಾದ ವಿಕಾಸ್ ತನೇಜಾ, ಪೃಥ್ವಿ ರಾಜ್ ಸಿಂಗ್, ದೀಪಕ್ ಸಿಂಗ್ ಅಹ್ಲಾವತ್ ವಿರುದ್ಧ ಜಾರಿ ನಿರ್ದೇಶನಾಲಯ(ಈಡಿ) ನಗರದ ವಿಶೇಷ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಿದೆ.
ತೆಲಂಗಾಣದಲ್ಲಿ ದಾಖಲಾಗಿದ್ದ ಹಲವು ಎಫ್ಐಆರ್ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ.ಡಿ ಅಧಿಕಾರಿಗಳು ಪ್ರತ್ಯೇಕ ತನಿಖೆ ಕೈಗೆತ್ತಿಕೊಂಡಿದ್ದರು. ಈ.ಡಿ ತನಿಖೆಯಲ್ಲಿ ರಮ್ಮಿಟೈಮ್ ಸಂಸ್ಥೆಗಳು ರಮ್ಮಿಕಲ್ಚರ್, ರಮ್ಮಿಟೈಮ್, ಪ್ಲೇಶಿಪ್ ಹಾಗೂ ರಮ್ಮಿಟೈಮ್ನಂತಹ ಆನ್ಲೈನ್ ವೇದಿಕೆಗಳ ಮೂಲಕ ಈ ಕಂಪನಿಗಳು ಬೃಹತ್ ದಂಧೆ ನಡೆಸಿರುವುದು ಬಯಲಾಗಿದೆ.
ತನಿಖೆ ಆರಂಭಿಸಿ ಕ್ರಮ ಕೈಗೊಂಡಿರುವ ಜಾರಿ ನಿರ್ದೇಶನಾಲಯವು ಆರೋಪಿಗಳು ಹಾಗೂ ಅವರ ಕುಟುಂಬಸ್ಥರ ಹೆಸರಿನಲ್ಲಿದ್ದ ಸುಮಾರು 2,401 ಕೋಟಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದ್ದು, ತನಿಖೆ ಮುಂದುವರಿದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.




