ಸ್ವಾತಂತ್ರ್ಯೋತ್ಸವ ಧ್ವಜಾರೋಹಣ; ವಿಜಯನಗರಕ್ಕೆ ಬಸವಂತಪ್ಪ, ಉಡುಪಿಗೆ ರಿಝ್ವಾನ್ ಅರ್ಶದ್ ನೇಮಕ

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು : ‘ವಿಜಯನಗರ ಜಿಲ್ಲೆಯ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಕ್ಕೆ ಹಾಜರಾಗಲು ಸಾಧ್ಯವಾದ ಕಾರಣ ವಿನಾಯಿತಿ ನೀಡಬೇಕು’ ಎಂದು ಸಚಿವ ಝಮೀರ್ ಅಹ್ಮದ್ ಖಾನ್ ಕೊರಿಕೆ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಮುಜುರಾಯಿ ಸಚಿವ ಬಸವಂತಪ್ಪ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಶುಕ್ರವಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರಕಾರದ ವಿಶೇಷ ಕಾರ್ಯದರ್ಶಿ ವಿರಭದ್ರ ಹಂಚಿನಾಳ್ ಅವರು ಆದೇಶ ಹೊರಡಿಸಿದ್ದು, ಈ ಹಿಂದೆ ಉಡುಪಿ ಜಿಲ್ಲೆ ಧ್ವಜಾರೋಹಣ ನೆರವೇರಿಸಲು ನೇಮಿಸಿದ್ದ ಸಚಿವ ಬಸವಂತಪ್ಪ ಬದಲಿಗೆ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ರಿಝ್ವಾನ್ ಅರ್ಶದ್ ಅವರನ್ನು ನೇಮಿಸಲಾಗಿದೆ.
ಖಾತೆ ಹಂಚಿಕೆ ವಿಚಾರದಲ್ಲಿ ಬೇಸರಗೊಂಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು, ‘ವಿಜಯನಗರ ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಹೊಣೆ ಬೇಡ. ಅಲ್ಲದೆ, ಮುಂಬರುವ ಜಿಬಿಎ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳ ತಯಾರಿ ಕಾರ್ಯದಿಂದ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗುವುದಿಲ್ಲ’ ಎಂದು ಕೋರಿದ್ದರು. ಆ ಹಿನ್ನೆಲೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಗೊತ್ತಾಗಿದೆ.
ಡಾ.ಜಿ.ಪರಮೇಶ್ವರ್-ತುಮಕೂರು, ಕೆ.ಎಚ್.ಮುನಿಯಪ್ಪ-ಬೆಂಗಳೂರು ಗ್ರಾಮಾಂತರ, ಕೆ.ಜೆ.ಜಾರ್ಜ್- ಚಿಕ್ಕಮಗಳೂರು, ಎಂ.ಬಿ.ಪಾಟೀಲ್-ವಿಜಯಪುರ, ರಾಮಲಿಂಗಾರೆಡ್ಡಿ-ಕೋಲಾರ, ಸತೀಶ್ ಜಾರಿಕಿಹೊಳಿ- ಬೆಳಗಾವಿ, ಪ್ರಿಯಾಂಕ್ ಖರ್ಗೆ-ಕಲಬುರಗಿ, ಯು.ಟಿ.ಖಾದರ್-ದಕ್ಷಿಣ ಕನ್ನಡ, ಈಶ್ವರ್ ಖಂಡ್ರೆ-ಬೀದರ್, ಡಾ. ಯತೀಂದ್ರ-ಮೈಸೂರು.
ಬೈರತಿ ಸುರೇಶ್-ಚಿಕ್ಕಬಳ್ಳಾಪುರ, ಡಾ.ಶರಣಪ್ರಕಾಶ್ ಪಾಟೀಲ್-ಯಾದಗಿರಿ, ಡಾ.ಅಜಯ್ ಸಿಂಗ್-ರಾಯಚೂರು, ಎಚ್.ಸಿ.ಬಾಲಕೃಷ್ಣ-ಬೆಂಗಳೂರು ದಕ್ಷಿಣ, ಬಸವಂತಪ್ಪ-ವಿಜಯನಗರ, ಬಸವರಾಜ ರಾಯರೆಡ್ಡಿ-ಗದಗ, ಚಲುವರಾಯಸ್ವಾಮಿ-ಮಂಡ್ಯ, ಲಕ್ಷ್ಮಣ ಸವದಿ-ಉತ್ತರ ಕನ್ನಡ, ಮಧುಬಂಗಾರಪ್ಪ- ಶಿವಮೊಗ್ಗ, ಎಸ್.ಎಸ್.ಮಲ್ಲಿಕಾರ್ಜುನ್-ದಾವಣಗೆರೆ, ಬಿ.ನಾಗೇಂದ್ರ-ಬಳ್ಳಾರಿ.
ನರೇಂದ್ರಸ್ವಾಮಿ-ಕೊಡಗು, ಪುಟ್ಟರಂಗಶೆಟ್ಟಿ-ಚಾಮರಾಜನಗರ, ರಘುಮೂರ್ತಿ-ಚಿತ್ರದುರ್ಗ, ರುದ್ರಪ್ಪ ಲಮಾಣಿ-ಹಾವೇರಿ, ಸಂತೋಷ್ ಲಾಡ್-ಧಾರವಾಡ, ಶಿವಲಿಂಗೇಗೌಡ-ಹಾಸನ, ಶಿವರಾಜ್ ತಂಗಡಗಿ- ಕೊಪ್ಪಳ, ವಿಜಯಾನಂದ ಕಾಶಪ್ಪನವರ್-ಬಾಗಲಕೋಟೆ ಹಾಗೂ ರಿಝ್ವಾನ್ ಅರ್ಶದ್-ಉಡುಪಿ ಜಿಲ್ಲೆ.






