ಮದ್ಯ ಮಾರಾಟ ನಿಷೇಧಿಸುವಂತೆ ನೈಜ ಹೋರಾಟಗಾರರ ವೇದಿಕೆ ಮನವಿ

ಸಾಂದರ್ಭಿಕ ಚಿತ್ರ | PC : Image by freepic.diller on Magnific
ಬೆಂಗಳೂರು : ಮದ್ಯ ಸೇವನೆಯು ಆರೋಗ್ಯಕ್ಕೆ ಹಾನಿಕರವಾಗಿದ್ದು ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸುವಂತೆ ನೈಜ ಹೋರಾಟಗಾರರ ವೇದಿಕೆ ಸರಕಾರಕ್ಕೆ ಮನವಿ ಮಾಡಿದೆ.
ಸೋಮವಾರ ಈ ಕುರಿತು ಆರೋಗ್ಯ ಸಚಿವ ಯು.ಟಿ.ಖಾದರ್ ಅವರಿಗೆ ಪತ್ರ ಬರೆದಿರುವ ನೈಜ ಹೋರಾಟಗಾರರ ವೇದಿಕೆಯ ಎಚ್.ಎಂ.ವೆಂಕಟೇಶ್, ಮದ್ಯಪಾನ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ‘ಮದ್ಯದ ಬಾಟಲ್ ಮೇಲೆ ಮುದ್ರಿಸಿ’ ರಾಜ್ಯದ ನಾಗರಿಕರಿಗೆ ಮಾರಾಟ ಮಾಡುತ್ತಿರುವ ಸರಕಾರವು ಜನರ ಆರೋಗ್ಯವನ್ನು ಹದಗೆಡಿಸುತ್ತಿಲ್ಲವೇ? ಎಂಬ ಪ್ರಶ್ನೆ ಎದ್ದಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಇಂತಹ ಹಾನಿಕಾರಕ ಮದ್ಯವನ್ನು ಸರಬರಾಜು ಮಾಡುವಲ್ಲಿ ರಾಜ್ಯ ಸರಕಾರದ ಆಸಕ್ತಿ ನೋಡಿದರೆ ಜನರ ಆರೋಗ್ಯದ ಬಗ್ಗೆ ಸರಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲವೆಂದು ಎನಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರಕಾರದ ಬೊಕ್ಕಸಕ್ಕೆ ಅತಿಯಾಗಿ ತೆರಿಗೆ ಬರುವುದೇ ಈ ಮಧ್ಯ ಮಾರಾಟದಿಂದ ಎಂಬ ವಿಷಯವೂ ನಮ್ಮ ಗಮನಕ್ಕೆ ಇದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿರುವ ಆರೋಗ್ಯ ಇಲಾಖೆ ಹಾಗೂ ಆರೋಗ್ಯ ಸಚಿವರಾದ ತಾವು, ಈ ಮದ್ಯ ಮಾರಾಟ ನಿಷೇಧದ ಬಗ್ಗೆ ಏಕೆ ಗಮನಹರಿಸುತ್ತಿಲ್ಲ? ಎಂಬುದು ತಿಳಿಯುತ್ತಿಲ್ಲ ಎಂದು ತಿಳಿಸಿದ್ದಾರೆ.
ಸರಕಾರದ ದ್ವಂದ್ವ ನೀತಿಯನ್ನು ಸರಿಪಡಿಸಿ ಕರ್ನಾಟಕ ರಾಜ್ಯವನ್ನು ಮದ್ಯಪಾನ ಮುಕ್ತ ಕರ್ನಾಟಕ ಮಾಡಲು ಆರೋಗ್ಯ ಸಚಿವರಾದ ತಾವು ಅತ್ಯಂತ ಪ್ರಮುಖ ಪಾತ್ರ ವಹಿಸಿ ರಾಜ್ಯದ ನಾಗರೀಕರ ಆರೋಗ್ಯವನ್ನು ಕಾಪಾಡಬೇಕು ಎಂದು ತಿಳಿಸಿದ್ದಾರೆ.






