ಬೆಂಗಳೂರಿನ ಐದು ಮೇಲ್ಸೇತುವೆಗಳಲ್ಲಿ ಕೆಲ ವಾಹನಗಳ ಸಂಚಾರ ನಿಷೇಧ

ಸಾಂದರ್ಭಿಕ ಚಿತ್ರ | PC : Image by nikitabuida on Magnific
ಬೆಂಗಳೂರು : ರಸ್ತೆ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ನಗರದ ಐದು ಮೇಲ್ಸೇತುವೆಗಳಲ್ಲಿ ಕೆಲವು ಮಾದರಿಯ ವಾಹನಗಳ ಸಂಚಾರವನ್ನು ಸೆ.4ರಿಂದ ನಿಷೇಧಿಸಿ, ನಗರ ಸಂಚಾರ ವಿಭಾಗವು ಆದೇಶ ಹೊರಡಿಸಿದೆ.
ರಸ್ತೆ ಸುರಕ್ಷತೆ, ಮೇಲ್ಸೇತುವೆ ರಸ್ತೆ ವಿನ್ಯಾಸ ಮತ್ತು ಅಗಲ, ಅಪಘಾತದ ಪರಿಣಾಮದ ತೀವ್ರತೆ ಕಡಿಮೆ ಮಾಡುವುದು, ವಾಹನಗಳ ದುರಸ್ತಿಯಿಂದಾಗಿ ಉಂಟಾಗುತ್ತಿದ್ದ ಸಂಚಾರ ದಟ್ಟಣೆ ನಿವಾರಣೆ, ಮೇಲ್ಸೇತುವೆ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಉಂಟಾಗುತ್ತಿರುವ ದಟ್ಟಣೆ ನಿವಾರಣೆ, ತುರ್ತು ಪರಿಸ್ಥಿತಿಯಲ್ಲಿ ಸಂಚಾರ ನಿರ್ವಹಣೆ, ಪಾದಚಾರಿಗಳ ಮತ್ತು ದ್ವಿಚಕ್ರ ವಾಹನ ಸವಾರರ ಸುರಕ್ಷತೆ ಮತ್ತು ಸಮಗ್ರ ರಸ್ತೆ ಸುರಕ್ಷತಾ ದೃಷ್ಟಿಕೋನವನ್ನು ಇಟ್ಟುಕೊಂಡು ಮೇಲ್ಸೇತುವೆ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಬಿಜಿಎಸ್ ಮೇಲ್ಸೇತುವೆ, ಪೀಣ್ಯ ಎಲಿವೇಟೆಡ್ ಕಾರಿಡಾರ್ ಡಬಲ್ ಡೆಕ್ಕರ್ ಫ್ಲೈ ಓವರ್, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್ (ಸಂಜೀವನಗರ ಕ್ರಾಸ್ನಿಂದ ವಿದ್ಯಾಶಿಲ್ಪ ಜಂಕ್ಷನ್ ವರೆಗೆ) ಕಾರಿಡಾರ್ಗಳಲ್ಲಿ ಸೆ.4 ರಿಂದ ಹಾಗೂ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್ನಲ್ಲಿ ಸೆ.4ರಿಂದ ವಾಹನಗಳ ಸಂಚಾರಗಳ ನಿಬಂಧ ಜಾರಿಗೆ ಬರಲಿದೆ.
ಬಿಜಿಎಸ್ ಮೇಲ್ಸೇತುವೆ :
ಮೈಸೂರು ರಸ್ತೆಯಲ್ಲಿರುವ ಬಿಜಿಎಸ್ ಫ್ಲೈ ಓವರ್ನಲ್ಲಿ ಭಾರಿ ಸರಕು ಸಾಗಾಣಿಕೆ ವಾಹನಗಳನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಇತರ ಎಲ್ಲ ಮಾದರಿಯ ಸರಕು ಸಾಗಾಣಿಕೆಯ ವಾಹನಗಳು, ಮೂರು ಚಕ್ರದ ಗೂಡ್ಸ್ ಆಟೋಗಳನ್ನು ಬೆಳಗ್ಗೆ 7ರಿಂದ 11ರವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 10ರ ವರೆಗೆ ನಿರ್ಬಂ ಧಿಸಲಾಗಿದೆ.
ಪೀಣ್ಯ ಎಲಿವೇಟೆಡ್ ಕಾರಿಡಾರ್: ಆಟೋರಿಕ್ಷಾ ಹಾಗೂ ತ್ರಿಚಕ್ರ ಗೂಡ್ಸ್ ಆಟೋಗಳನ್ನು ದಿನದ 24 ಗಂಟೆಯೂ ನಿಷೇಧಿಸಲಾಗಿದ್ದು, ಭಾರಿ ಹಾಗೂ ಮಧ್ಯಮ ಸರಕು ವಾಹನಗಳ ಸಂಚಾರವನ್ನು ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 10 ಗಂಟೆಯವರೆಗೆ ನಿರ್ಬಂ ಧಿಸಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್: ಎಲ್ಲ ಮಾದರಿಯ ಸರಕು ಸಾಗಾಣಿಕೆ ವಾಹನಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಸಂಪೂರ್ಣ ನಿಷೇಧಿಸಲಾಗಿದೆ. ಅಲ್ಲದೆ, ದ್ವಿಚಕ್ರ ವಾಹನ, ಆಟೋರಿಕ್ಷಾ ಹಾಗೂ ತ್ರಿಚಕ್ರ ವಾಹನಗಳ ಸಂಚಾರವನ್ನು ದಿನದ 24 ಗಂಟೆ ಸಂಪೂರ್ಣ ನಿರ್ಬಂ ಧಿಸಲಾಗಿದೆ.
ಡಬಲ್ ಡೆಕ್ಕರ್ ಫ್ಲೈ ಓವರ್: ಸಿಲ್ಕ್ ಬೋರ್ಡ್ನಿಂದ ರಾಗಿಗುಡ್ಡದವರೆಗೆ ಡಬಲ್ ಡೆಕ್ಕರ್ ಫ್ಲೈ ಓವರ್ನಲ್ಲಿ ದಿನದ 24 ಗಂಟೆಯೂ ಸಂಪೂರ್ಣ ಭಾರಿ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಸಂಜೀವನಗರ ಕ್ರಾಸ್ನಿಂದ ವಿದ್ಯಾಶಿಲ್ಪ ಜಂಕ್ಷನ್ ವರೆಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್ನಲ್ಲಿ ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಲ್ಲದೆ ಎಲ್ಲ ವಿಧದ ಸರಕು ಸಾಗಾಣಿಕೆ ವಾಹನಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ನಿಷೇಧಿಸಲಾಗಿದೆ.
...............






