ನಾಮಪತ್ರ ಅಂಗೀಕಾರಕ್ಕೆ ನಿರ್ದೇಶನ ಕೋರಿ ಅರ್ಜಿ; ಕೆಯುಡಬ್ಲ್ಯುಜೆಗೆ ಹೈಕೋರ್ಟ್ ತುರ್ತು ನೋಟಿಸ್

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ (ಕೆಯುಡಬ್ಲ್ಯುಜೆ) ತುಮಕೂರು ಜಿಲ್ಲಾ ಸಮಿತಿಯ ಖಜಾಂಜಿ ಸ್ಥಾನಕ್ಕೆ ನವೆಂಬರ್ 9ರಂದು ನಡೆಯಲಿರುವ ಚುನಾವಣೆಗೆ ತಮ್ಮ ನಾಮಪತ್ರ ಅಂಗೀಕರಿಸಲು ಜಿಲ್ಲಾ ಚುನಾವಣಾಧಿಕಾರಿಗೆ ನಿರ್ದೇಶಿಸಬೇಕೆಂದು ಕೋರಿ ಪತ್ರಕರ್ತ ಎಚ್.ಎನ್. ಶಂಕರಪ್ಪ ಸಲ್ಲಿಸಿರುವ ಅರ್ಜಿ ಸಂಬಂಧ ಕೆಯುಡಬ್ಲ್ಯುಜೆಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿಗೊಳಿಸಿದೆ.
ಎಚ್.ಎನ್. ಶಂಕರಪ್ಪ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು, ನವೆಂಬರ್ 9ರಂದು ಚುನಾವಣೆ ನಡೆಯಲಿದೆ. ಅರ್ಜಿದಾರರ ನಾಮಪತ್ರ ಅಂಗೀಕರಿಸಲಾಗಿಲ್ಲ. ಅದಕ್ಕೆ ಕಾರಣ ಸಹ ನೀಡಲಾಗಿಲ್ಲ. ವಿಷಯ ತುರ್ತಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ನಾಮಪತ್ರ ಅಂಗೀಕಾರ ವಿಚಾರದಲ್ಲಿ ಹೆಚ್ಚೇನೂ ಹೇಳಲು ಬರುವುದಿಲ್ಲ ಎಂದು ನ್ಯಾಯಪೀಠ ಮೌಖಿಕವಾಗಿ ಹೇಳಿತಲ್ಲದೆ, ಅರ್ಜಿ ಸಂಬಂಧ ಕೆಯುಡಬ್ಲ್ಯುಜೆ, ರಾಜ್ಯ ಚುನಾವಣಾಧಿಕಾರಿ ಎನ್. ರವಿಕುಮಾರ್, ಜಿಲ್ಲಾ ಚುನಾವಣಾಧಿಕಾರಿ ಟಿ.ಸಿ. ಕಾಂತರಾಜು ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.







