ಕೋಗಿಲು ಲೇಔಟ್ ಧ್ವಂಸ ಕಾರ್ಯಾಚರಣೆ | 394 ಮಕ್ಕಳು ಸೇರಿ 1,007 ಜನ ಬಾಧಿತರು : ತಾಹಿರ್ ಹುಸೇನ್

ಬೆಂಗಳೂರು : ಕೋಗಿಲು ಬಳಿಯ ಫಕೀರ್ ಕಾಲನಿಯಲ್ಲಿ ನೂರಾರು ಮನೆಗಳನ್ನು ಧ್ವಂಸಗೊಳಿಸಿದ ಸರಕಾರದ ಕ್ರಮವನ್ನು ಖಂಡಿಸಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಉಪಾಧ್ಯಕ್ಷ ಅಬ್ದುಲ್ ಹಮೀದ್ ವಾಣಿಯಂಬಲಂ ಮತ್ತು ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹಿರ್ ಹುಸೇನ್ ನೇತೃತ್ವದ ನಿಯೋಗವು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದೆ.
ಈ ಪ್ರದೇಶದಲ್ಲಿ ಫಕೀರ್ ಕಾಲನಿ, ಫಕೀರ್ ಕಾಲನಿ (ನ್ಯೂ) ಹಾಗೂ ವಸೀಮ್ ಲೇಔಟ್ ಎಂಬ ಮೂರು ವಸತಿ ಪ್ರದೇಶಗಳಿದ್ದು, ಒಟ್ಟು 167 ಮನೆಗಳು ಧ್ವಂಸಗೊಂಡಿವೆ. ಈ ಕಾರ್ಯಾಚರಣೆಯಿಂದ 394 ಮಕ್ಕಳು ಸೇರಿ ಒಟ್ಟು 1,007 ಜನರು ಬಾಧಿತರಾಗಿದ್ದಾರೆ. ಫಕೀರ್ ಕಾಲನಿ ಕಳೆದ 30 ವರ್ಷಗಳಿಂದ ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ವಸತಿ ಪ್ರದೇಶವಾಗಿದೆ ಎಂದು ತಾಹಿರ್ ಹುಸೇನ್ ತಿಳಿಸಿದ್ದಾರೆ.
ಅನೇಕ ನಿವಾಸಿಗಳು ಸ್ಥಳೀಯ ರಾಜಕೀಯ ಮಧ್ಯವರ್ತಿಗಳಿಂದ 1-2 ಲಕ್ಷ ರೂ.ಪಾವತಿಸಿ ಜಮೀನು ಖರೀದಿಸಿದ್ದು, ಮನೆ ನಿರ್ಮಾಣಕ್ಕೆ 2-3 ಲಕ್ಷ ರೂ.ಹೂಡಿಕೆ ಮಾಡಿದ್ದಾರೆ. ಹಲವು ಕುಟುಂಬಗಳಿಗೆ ಸರಕಾರದಿಂದಲೆ ‘ಪ್ರೊ ವಿಷನಲ್ ಅಲಾಟ್‍ಮೆಂಟ್ ಲೆಟರ್ ಫಾರ್ ಸೈಟ್’ ನೀಡಲಾಗಿದ್ದು, ಅದೇ ವಿಳಾಸದಲ್ಲಿ ವಿದ್ಯುತ್ ಸಂಪರ್ಕ, ಆಧಾರ್ ಕಾರ್ಡ್ ಸೇರಿದಂತೆ ಇತರೆ ಅಧಿಕೃತ ದಾಖಲೆಗಳು ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸರಕಾರ ಹೇಳುವಂತೆ ಇದು ಕಸದ ತ್ಯಾಜ್ಯ ಪ್ರದೇಶವಲ್ಲ ಎಂಬುದು ಪರಿಶೀಲನೆಯಲ್ಲಿ ಸ್ಪಷ್ಟವಾಗಿದೆ. ಧ್ವಂಸಕ್ಕೆ ಮೊದಲು ನಿವಾಸಿಗಳಿಗೆ ಯಾವುದೇ ನೋಟಿಸ್ ನೀಡಿಲ್ಲ. ಮನೆಯೊಳಗಿರುವ ವಸ್ತುಗಳನ್ನು ಎತ್ತಿಕೊಳ್ಳಲು ಅವಕಾಶ ನೀಡಿಲ್ಲ. ಧ್ವಂಸ ನಂತರವೂ ಸರಕಾರದಿಂದ ಯಾವುದೇ ಪರ್ಯಾಯ ವ್ಯವಸ್ಥೆ ಅಥವಾ ಪುನರ್ವಸತಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ದೂರಿದ್ದಾರೆ.
ಕೆಲ ಸ್ಥಳೀಯ ರಾಜಕೀಯ ಮುಖಂಡರು ಜನರನ್ನು ತಪ್ಪು ದಾರಿಗೆಳೆದು ಮೋಸಗೊಳಿಸಿರುವುದು ಕಂಡುಬಂದಿದೆ. ಈ ಪ್ರದೇಶದಲ್ಲಿ ಒಬ್ಬರೂ ಅಕ್ರಮ ವಲಸಿಗರು ಇಲ್ಲ. ಸರಕಾರ ಮಾನವೀಯ ದೃಷ್ಟಿಯಿಂದ ತಕ್ಷಣ ಮಧ್ಯಪ್ರವೇಶಿಸಿ ಸಂತ್ರಸ್ತರಿಗೆ ಸೂರು ಒದಗಿಸಬೇಕು, ಉಂಟಾದ ನಷ್ಟಕ್ಕೆ ತಕ್ಕ ಪರಿಹಾರ ನೀಡಬೇಕು, ದಾಖಲೆಗಳನ್ನು ಹೊಂದಿರುವವರಿಗೆ ಶಾಶ್ವತ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ನಿಯೋಗದಲ್ಲಿ ರಾಜ್ಯ ಕಾರ್ಯದರ್ಶಿಗಳಾದ ರಿಯಾಝ್ ಅಹ್ಮದ್, ತಲತ್ ಯಾಸ್ಮೀನ್, ಎಸ್‍ಡಬ್ಲ್ಯುಸಿ ಸದಸ್ಯೆ ಅನ್ವಿ ಪ್ರಭಾಕರ್, ಬೆಂಗಳೂರು ದಕ್ಷಿಣ ಅಧ್ಯಕ್ಷ ಇಮ್ತಿಯಾಜ್ ಅಹ್ಮದ್, ಬೆಂಗಳೂರು ಉತ್ತರ ಉಪಾಧ್ಯಕ್ಷ ಅಬ್ದುಸ್ಸಮದ್, ಬೆಂಗಳೂರು ದಕ್ಷಿಣ ಪ್ರಧಾನ ಕಾರ್ಯದರ್ಶಿ ದಾವೂದ್ ಅಂಬರ್, ಹುಸೇನ್ ಸಾಹೇಬ್, ಪರ್ವೀನ್ ಶೇಖ್ ಸೇರಿದಂತೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.







