ವೃತ್ತಿ ಶಿಕ್ಷಣ : ಸರಕಾರಿ ಶಾಲಾ ಮಕ್ಕಳಿಗೆ ಶೇ.7.5 ಮೀಸಲು

ಸಾಂದರ್ಭಿಕ ಚಿತ್ರ | PC : Image by magnific
ಬೆಂಗಳೂರು : ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕೆ ಶೇ.7.5ರಷ್ಟು ಮೀಸಲಾತಿ ಸಿಗಲಿದೆ.
ಈ ಕುರಿತು ರವಿವಾರ ರಾಜ್ಯ ಸರಕಾರ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಸರಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಓದಿದ ಮಕ್ಕಳಿಗೆ ಈ ಪ್ರಯೋಜನ ಲಭ್ಯವಾಗಲಿದೆ ಎಂದು ತಿಳಿಸಲಾಗಿದೆ.
ವೃತ್ತಿ ಶಿಕ್ಷಣ ಕೋರ್ಸ್ಗಳ ಪ್ರವೇಶದ ವೇಳೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಸೀಟುಗಳನ್ನು ಈಗಾಗಲೇ ನೀಡಲಾಗುತ್ತಿದೆ. ಈ ಮೀಸಲಾತಿಯಲ್ಲಿ ಅರ್ಧದಷ್ಟು ಸೀಟುಗಳನ್ನು ಸರಕಾರಿ ಶಾಲಾ ವಿದ್ಯಾರ್ಥಿಗಳಿಗೇ ಮೀಸಲಿಡಲು ನಿಯಮಕ್ಕೆ ತಿದ್ದುಪಡಿ ತರಲಾಗಿದೆ.
ನುಡಿದಂತೆ ನಡೆದಿದ್ದೇವೆ! : ಮಧು ಬಂಗಾರಪ್ಪ
ದಸರಾದ ಈ ಶುಭ ಸಂದರ್ಭದಲ್ಲಿ ಸಿಹಿ ಸುದ್ದಿಯೊಂದನ್ನು ಹಂಚಿಕೊಳ್ಳುತ್ತಿದ್ದೇನೆ. ಪ್ರಸ್ತುತ ಚಾಲ್ತಿಯಲ್ಲಿರುವ ಶೇ.15ರಷ್ಟು ಗ್ರಾಮೀಣ ಮೀಸಲಾತಿಯಲ್ಲಿಯೇ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಈ ಶೇ.7.5ರಷ್ಟು ಒಳಮೀಸಲಾತಿಯನ್ನು ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿರುವ ಸರಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಇದರಿಂದ ಅನುಕೂಲವಾಗಲಿದೆ. ಈ ಮೀಸಲಾತಿಯ ಕಾರಣಕ್ಕೇ ಗ್ರಾಮೀಣ ಭಾಗದಲ್ಲಿನ ಸರಕಾರಿ ಶಾಲೆಗಳಲ್ಲಿ ಮತ್ತು ಪಿಯುಸಿ ಕಾಲೇಜುಗಳಲ್ಲಿ ಪ್ರವೇಶಾತಿಯು ಹೆಚ್ಚಲಿದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.






