163 ಸರಕಾರಿ ಆಸ್ಪತ್ರೆಗಳಲ್ಲಿ ಸ್ಟೆಮಿ ಕಾರ್ಯಕ್ರಮ ಅನುಷ್ಠಾನಕ್ಕೆ ಅನುಮೋದನೆ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ.8: ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಯಲು ‘ಸ್ಟೆಮಿ ಮ್ಯಾನೇಜ್ಮೆಂಟ್’ ಕಾರ್ಯಕ್ರಮವನ್ನು ರಾಜ್ಯದ 16 ಜಿಲ್ಲಾಸ್ಪತ್ರೆ ಮತ್ತು 147 ತಾಲೂಕು ಆಸ್ಪತ್ರೆ ಸೇರಿ ಒಟ್ಟು 163 ಸರಕಾರಿ ಆಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರಕಾರವು ಸೋಮವಾರದಂದು ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ.
ಶೇ.50ರಷ್ಟು ಆಸ್ಪತ್ರೆಗಳನ್ನು ಪಿಪಿಪಿ ಮಾದರಿಯಲ್ಲಿ ಮತ್ತು ಶೇ.50ರಷ್ಟು ಆಸ್ಪತ್ರೆಗಳನ್ನು ಇಲಾಖೆಯ ಸಂಪನ್ಮೂಲದೊಂದಿಗೆ ಸ್ಟೆಮಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಸ್ತುತ ಪಿಪಿಪಿ ಮಾದರಿಯನ್ನು ನಿರ್ವಹಿಸಲಾಗುತ್ತಿರುವ ಮೊದಲನೆ ಹಂತದ 45 ಮತ್ತು ಎರಡನೆ ಹಂತದ 41 ಆಸ್ಪತ್ರೆಗಳಲ್ಲಿ(ಒಟ್ಟು 86 ಕೇಂದ್ರಗಳಲ್ಲಿ) ಸ್ಟೆಮಿ ಕಾರ್ಯಕ್ರಮವನ್ನು ಪಿಪಿಪಿ ಮಾದರಿಯಲ್ಲಿಯೇ ಮುಂದುವರೆಸಲಾಗುವುದು.
ಹೊಸದಾಗಿ ಸೇರ್ಪಡೆಗೊಳಿಸಲಾಗುವ 77 ಕೇಂದ್ರಗಳಲ್ಲಿ ಇಲಾಖೆಯ ಸಂಪನ್ಮೂಲದೊಂದಿಗೆ ಸ್ಟೆಮಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು. ಈಗಾಗಲೇ ಮೊದಲನೆ ಹಂತದ ಸ್ಟೆಮಿ ಕಾರ್ಯಕ್ರಮದ ಟೆಂಡರ್ ಮುಕ್ತಾಯಗೊಂಡಿರುವುದರಿಂದ, ಟೆಂಡರ್ ಕರೆಯಲು ಅನುಮೋದನೆ ನೀಡಲಾಗಿದೆ.
ಟೆಲಿ-ರೇಡಿಯಾಲಜಿ ಪಾಲುದಾರರನ್ನು ಅಂತಿಮಗೊಳಿಸುವವರೆಗೆ, ಹೊಸದಾಗಿ ಪ್ರಸ್ತಾಪಿಸಲಾದ ಕೇಂದ್ರಗಳಲ್ಲಿ ಸ್ಟೆಮಿ ಕಾರ್ಯಕ್ರಮವನ್ನು ಇಲಾಖೆಯ ವತಿಯಿಂದ ನಿರ್ವಹಿಸಲಲಾಗುತ್ತಿದೆ. ಹೀಗಾಗಿ ಅಸ್ತಿತ್ವದಲ್ಲಿರುವ ಸ್ಟೆಮಿ ಪಾಲುದಾರರೊಂದಿಗೆ ಐಟಿ ಪ್ಯಾಟ್ಫಾರ್ಮ್ ಸೇವೆಗಳನ್ನು ಪಡೆಯಲಾಗುತ್ತದೆ.
ಇನ್ನು ರಾಜ್ಯಾದ್ಯಂತ ಟಿಲಿ-ಇಸಿಜಿ ಮೇಲ್ವಿಚಾರಣೆ ಮಾಡಲು ಯೋಜನಾ ನಿರ್ವಹಣಾ ಘಟಕವನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಘಟಕದಲ್ಲಿ ಒಬ್ಬ ಕಾರ್ಡಿಯೋಲಾಜಿಸ್ಟ್, ಒಬ್ಬ ವೈದ್ಯ ಮತ್ತು ಒಬ್ಬ ನೋಡಲ್ ಅಧಿಕಾರಿ ಇರಲಿದ್ದಾರೆ.







