Bengaluru | ಮಕ್ಕಳ ಕಥೆ ಪುಸ್ತಕಗಳಲ್ಲಿ ಅಡಗಿಸಿಟ್ಟು ಸಾಗಿಸುತ್ತಿದ್ದ 38.60 ಕೋಟಿ ರೂ. ಮೌಲ್ಯದ ಕೊಕೇನ್ ಜಪ್ತಿ: ಆರೋಪಿಯ ಬಂಧನ

Photo credit: X/@blrcustoms
ಬೆಂಗಳೂರು: ಮಕ್ಕಳ ಕಥೆ ಪುಸ್ತಕಗಳಲ್ಲಿ ಅಡಗಿಸಿಟ್ಟು ಸಾಗಿಸುತ್ತಿದ್ದ ಬರೋಬ್ಬರಿ 38.60 ಕೋಟಿ ರೂ. ಮೌಲ್ಯದ 7.72 ಕೆ.ಜಿ. ಕೊಕೇನ್ ಅನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿರುವುದಾಗಿ ವರದಿಯಾಗಿದೆ.
ಇತ್ತೀಚೆಗೆ ಬ್ರೆಝಿಲ್ನ ಸಾವೊಪೊಲೊ ವಿಮಾನ ನಿಲ್ದಾಣದಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನೊಬ್ಬನ ಮೇಲೆ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಆತನ ಲಗೇಜ್ ತಪಾಸಣೆ ನಡೆಸಿದರು. ಮೇಲ್ನೋಟಕ್ಕೆ ಆತನ ಬ್ಯಾಗ್ನಲ್ಲಿ ಮಕ್ಕಳ ಕಥೆ ಪುಸ್ತಕಗಳು ಕಂಡುಬಂದಿದ್ದವು. ಆದರೆ, ಪುಸ್ತಕಗಳ ತೂಕ ಮತ್ತು ಅಸಹಜ ವಿನ್ಯಾಸ ಅಧಿಕಾರಿಗಳ ಸಂಶಯಕ್ಕೆ ಕಾರಣವಾಯಿತು. ಪುಸ್ತಕಗಳ ರಟ್ಟನ್ನು ಬಿಡಿಸಿ ನೋಡಿದಾಗ ಅದರೊಳಗೆ ಪೌಡರ್ ರೂಪದ ಕೊಕೇನ್ ಅನ್ನು ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ.
ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾದ 7.72 ಕೆ.ಜಿ. ಕೊಕೇನ್ ಮಾರುಕಟ್ಟೆ ಮೌಲ್ಯ ಸುಮಾರು 38.60 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದು ಬೆಂಗಳೂರು ವಿಮಾನ ನಿಲ್ದಾಣದ ಇತಿಹಾಸದಲ್ಲೇ ಕಸ್ಟಮ್ಸ್ ಇಲಾಖೆ ನಡೆಸಿದ ಅತಿ ದೊಡ್ಡ ಮಾದಕವಸ್ತು ಜಪ್ತಿ ಕಾರ್ಯಾಚರಣೆ ಎನ್ನಲಾಗಿದೆ.
ಸದ್ಯ, ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.





