ಮಧುಕರ್ ಶೆಟ್ಟಿಯವರಂತಹ ಆದರ್ಶ ವ್ಯಕ್ತಿಗಳು ಸಮಾಜಕ್ಕೆ ಬೇಕು : ಅಬ್ದುಲ್ ಅಹದ್

ಬೆಂಗಳೂರು : ಅಧಿಕಾರಿಗಳು ಮತ್ತು ರಾಜಕಾರಣಿಗಳು ಅವರ ಕೆಲಸವನ್ನು ಸರಿಯಾಗಿ ಮಾಡಿದರೆ, ಜನರು ಬೀದಿಗಿಳಿಯುವುದಿಲ್ಲ ಎಂದು ಡೆಪ್ಯೂಟಿ ಇನ್‍ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್, ಬಿಎಂಟಿಸಿಯ ಭದ್ರತಾ-ಜಾಗೃತದ ನಿರ್ದೇಶಕ ಅಬ್ದುಲ್ ಅಹದ್ ತಿಳಿಸಿದ್ದಾರೆ.
ಗುರುವಾರ ನಗರದ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಬೆಂಗಳೂರು ನಗರ ಮಹಾ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಸಾಂಸ್ಕೃತಿಕ ಕಲಾ ಕುಟೀರದ ವತಿಯಿಂದ ಆಯೋಜಿಸಿದ್ದ ಸಂಸ್ಥೆಯ ನಿರ್ವಾಹಕ ಸಿದ್ದರಾಮ ಕೊಪ್ಪರ್ ನಿರ್ದೇಶನದ ‘ಖಾಕಿಯೊಳಗಿನ ಸಂತ’ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಧುಕರ್ ಶೆಟ್ಟಿ ಅವರಂತಹ ಅಧಿಕಾರಿಗಳಿದ್ದರೆ, ಯಾವ ಜನರೂ ಬೀದಿಗಿಳಿಯುವುದಿಲ್ಲ. ಅಂತಹ ಮಹೋನ್ನತ ಆದರ್ಶವನ್ನು ಮಧುಕರ್ ಶೆಟ್ಟಿ ಅವರು ಹೊಂದಿದ್ದರು ಎಂದು ಅಬ್ದುಲ್ ಅಹದ್ ಅವರು ನುಡಿದರು.
ಮಧುಕರ್ ಶೆಟ್ಟಿ ಅವರ ಜೀವನಾಧಾರಿತ ನಾಟಕವನ್ನು ಏಕೆ ನೋಡಬೇಕೆಂದರೆ, ಭಾರತದಲ್ಲಿ ವರ್ಷಕ್ಕೆ ಸಾವಿರಾರು ಜನರು ಅಧಿಕಾರಿಗಳಾಗಿ ನೇಮಕವಾಗುತ್ತಾರೆ. ಸುಮಾರು 300 ಜನರು ಐಎಎಸ್, ಐಪಿಎಸ್ ಅಧಿಕಾರಿಗಳಾಗುತ್ತಾರೆ. ಆದರೆ ಒಬ್ಬ ವ್ಯಕ್ತಿ ಮಧುಕರ್ ಶೆಟ್ಟಿ ಅವರ ಜೊತೆಗೆ ಕೆಲಸ ಮಾಡಲು ಸೈದ್ಧಾಂತಿಕವಾಗಿ ಬದ್ಧರಾಗಿರಬೇಕು ಎಂದು ಅಬ್ದುಲ್ ಅಹದ್ ತಿಳಿಸಿದರು.
ಯಾವುದೇ ವಿಷಯದಲ್ಲಿ ರಾಜೀ ಆಗುವುದಿಲ್ಲ. ಲಂಚ ತೆಗೆದುಕೊಳ್ಳುವುದಿಲ್ಲ. ಎಲ್ಲರನ್ನು ಸಮಾನವಾಗಿ ನೋಡುತ್ತೇನೆ ಎಂದಾಗ ಮಾತ್ರ ಆ ವ್ಯಕ್ತಿ ಕಲೆಗೆ ವಸ್ತುವಾಗುತ್ತಾನೆ. ಮಧುಕರ್ ಶೆಟ್ಟಿಯವರಂತಹ ಆದರ್ಶ ವ್ಯಕ್ತಿಗಳು ಸಮಾಜಕ್ಕೆ ಬೇಕು. ಮಧುಕರ್ ಶೆಟ್ಟಿ ಅವರ ಹಾಗೆ ಆದರ್ಶಗಳನ್ನಿಟ್ಟುಕೊಂಡು ಜೀವನ ನಡೆಸುವುದು ಸಮಾಜಕ್ಕೆ ಅಗತ್ಯವಿದೆ ಎಂದು ಅಬ್ದುಲ್ ಅಹದ್ ಅಭಿಪ್ರಾಯಪಟ್ಟರು.
ಇದೇ ವೇಳೆ ಸಿದ್ದರಾಮ ಕೊಪ್ಪರ್ ನಿರ್ದೇಶನದ ‘ಖಾಕಿಯೊಳಗಿನ ಸಂತ’ ನಾಟಕ ಪ್ರದರ್ಶನ ನಡೆಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಪಿ.ವೈ. ನಾಯಕ್, ದಯಾನಂದ್ ಮತ್ತಿತರರು ಹಾಜರಿದ್ದರು.













