ಆನೇಕಲ್ | ಸರಣಿ ಅಪಘಾತ : 8 ಮಂದಿ ಮೃತ್ಯು

ಆನೇಕಲ್/ತಮಿಳುನಾಡು: ಭೀಕರ ರಸ್ತೆ ಅಪಘಾತ ಸಂಭವಿಸಿ 8 ಮಂದಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಈರೋಡ್–ಸೇಲಂ ರಸ್ತೆಯಲ್ಲಿ ನಡೆದಿದೆ.
ಗರ್ಭಿಣಿ, 11 ತಿಂಗಳ ಮಗು ಹಾಗೂ 5 ವರ್ಷದ ಬಾಲಕ ಸೇರಿದಂತೆ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಸರಣಿ ಅಪಘಾತ ಸಂಭವಿಸಿದ್ದು, ಈರೋಡ್‌ನಿಂದ ಸೇಲಂ ಕಡೆಗೆ ತೆರಳುತ್ತಿದ್ದ ಬಸ್ ದ್ವಿಚಕ್ರ ವಾಹನ ಮತ್ತು ಟಿಟಿ ವಾಹನಕ್ಕೆ ಢಿಕ್ಕಿ ಹೊಡೆದಿದೆ.
ಘಟನೆಯಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ತಾಯಿ ಮತ್ತು ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಕುಲದೇವತೆ ದೇವಸ್ಥಾನಕ್ಕೆ ತೆರಳಿ ಮರಳುತ್ತಿದ್ದ ಟಿಟಿ ವಾಹನದಲ್ಲಿದ್ದ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಭೀಕರ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಬೃಂದಾ ದೇವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಕುರಿತು ತನಿಖೆ ಮುಂದುವರಿದಿದೆ.





