ಪತ್ರಕರ್ತರು ಯಾರಿಗೂ ಹೆದರುವ ಅಗತ್ಯವಿಲ್ಲ: ಸಭಾಪತಿ ಹೊರಟ್ಟಿ

ಬೆಂಗಳೂರು: ಪತ್ರಕರ್ತರು ಉತ್ತಮವಾದ ಕೆಲಸ ಮಾಡಬೇಕು. ನೀವು ಆತ್ಮಸಾಕ್ಷಿಯಿಂದ ಕೆಲಸ ಮಾಡಿದ್ದರೆ ಯಾರಿಗೂ ಹೆದರುವ ಅವಶ್ಯಕತೆಯೇ ಇಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಪ್ರೆಸ್‍ಕ್ಲಬ್ ಆಫ್ ಬೆಂಗಳೂರು ವತಿಯಿಂದ ಆಯೋಜಿಸಿದ್ದ ವರ್ಷದ ವ್ಯಕ್ತಿ ಹಾಗೂ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಧ್ಯಮದಿಂದ ಸಮಾಜ ಸುಧಾರಣೆ ಸಾಧ್ಯ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಒಳಗೆ ಸುದ್ದಿವಾಹಿನಿಗಳಿಗೆ ಅವಕಾಶವಿರಲಿಲ್ಲ. ನಾನು ವಿಧಾನ ಪರಿಷತ್‍ನಲ್ಲಿ ಸುದ್ದಿವಾಹಿನಿಗಳ ಪ್ರವೇಶ ಹಾಗೂ ಪತ್ರಕರ್ತರಿಗೆ ಬೇಕಾದ ಎಲ್ಲ ಅನುಕೂಲಗಳನ್ನು ಮಾಡಿಕೊಟ್ಟಿದ್ದೇನೆ ಎಂದು ಹೇಳಿದರು.
ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರನ್ನು ನಾವು ಜೂನಿಯರ್ ಸಿದ್ದರಾಮಯ್ಯ ಎಂದು ಕರೆಯುತ್ತೇವೆ. ಯಾಕೆಂದ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತಾಡಲು ಮೊದಲು ಕೆ.ವಿ.ಪ್ರಭಾಕರ್ ಅವರನ್ನು ಕೇಳಬೇಕು. ಎಷ್ಟೋ ಸಲ ನಾವು ಇಕ್ಕಟ್ಟಿನ್ನಲ್ಲಿ ಸಿಲುಕಿದಾಗ ಅದನ್ನು ಕೆ.ವಿ.ಪ್ರಭಾಕರ್ ಪರಿಹರಿಸಿದ್ದಾರೆ ಎಂದು ಹೊರಟ್ಟಿ ಸ್ಮರಿಸಿದರು.
ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ವೃತ್ತಿಯನ್ನು ಎಂದೂ ಮರೆಯಬಾರದು. ಪ್ರಭಾಕರ್ ಅವರು ಸಿಎಂ ಮಾಧ್ಯಮ ಸಲಹೆಗಾರರಾಗಿದ್ದರೂ ಪತ್ರಿಕಾ ರಂಗವನ್ನು ಅವರು ಮರೆತಿಲ್ಲ. ನಾನು ಪತ್ರಕರ್ತರ ಜೊತೆ ಅಪಾರ ಒಡನಾಟವಿಟ್ಟುಕೊಂಡಿದ್ದೇನೆ. ಅನೇಕ ಸಲಹೆಯನ್ನು ಪತ್ರಕರ್ತರಿಂದ ಪಡೆಯುತ್ತೇನೆ ಎಂದು ಅವರು ತಿಳಿಸಿದರು.
ಇದೇ ವೇಳೆ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ವಿಶೇಷ ಪ್ರಶಸ್ತಿ ಸೇರಿದಂತೆ 55 ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಷಡಕ್ಷರಿ, ಪ್ರೆಸ್‍ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಶಿವಕುಮಾರ್ ಬೆಳ್ಳಿತಟ್ಟೆ, ಜಂಟಿ ಕಾರ್ಯದರ್ಶಿ ಧರಣೇಶ್ ಬಿ.ಎನ್., ಉಪಾಧ್ಯಕ್ಷ ಮೋಹನ್ ಕುಮಾರ್ ಬಿ.ಎನ್., ಲಕ್ಷ್ಮೀನಾರಾಯಣ, ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.







