ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ಅಪ್ಪು ಕಪ್ ಬ್ಯಾಡ್ಮಿಂಟನ್ ಟೂರ್ನಿ ಉದ್ಘಾಟನೆ

ಬೆಂಗಳೂರು ನಗರದ ಹೊರವಲಯದಲ್ಲಿರುವ ಕಿಂಗ್ಸ್ ಕ್ಲಬ್‍ನಲ್ಲಿ ಅಪ್ಪು ಕಪ್ ಸೀಸನ್-4 ಬ್ಯಾಡ್ಮಿಂಟನ್ ಟೂರ್ನಿಯ ಉದ್ಘಾಟನೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಭಾಕರ್, ಒಬ್ಬ ನಟ ತನ್ನ ನಟನೆಯಿಂದ ಜನರಿಗೆ ಇಷ್ಟ ಆಗುವುದು ಸಹಜ ಅದರಲ್ಲಿ ವಿಶೇಷವೇನೂ ಇರುವುದಿಲ್ಲ. ಆದರೆ ನಟನೆ ಮತ್ತು ವ್ಯಕ್ತಿತ್ವ ಇವೆರಡರಿಂದಲೂ ಜನರ ಹೃದಯಕ್ಕೆ ಹತ್ತಿರ ಆದವರು ನಮ್ಮ ಪುನೀತರಾಜ್ ಕುಮಾರ್ ಎಂದು ಬಣ್ಣಿಸಿದರು.
ನಾನು ಸುಮಾರು ಸಲ ಮುಖ್ಯಮಂತ್ರಿಯ ಮನೆಯಲ್ಲಿ ಅವರನ್ನು ಭೇಟಿಯಾಗಿರುವೆ. ಅತ್ಯಂತ ಸರಳ ಮತ್ತು ಸೌಜನ್ಯದ ವ್ಯಕ್ತಿತ್ವ ಅವರದ್ದು. ತಾನೊಬ್ಬ ಸ್ಟಾರ್ ನಟ ಎಂಬುದನ್ನು ವರ್ತನೆಯಲ್ಲಿ ಎಂದೂ ತೋರಿದವರಲ್ಲ. ಇವತ್ತು ಪುನೀತ್ ರಾಜ್‍ಕುಮಾರ್ ಅವರ ಹೆಸರಲ್ಲಿ ನಾವು-ನಿವೆಲ್ಲ ಸೇರಿ ಬ್ಯಾಡ್ಮಿಂಟನ್ ಹಬ್ಬವನ್ನ ಆಚರಣೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಎಲ್ಲ ಆಟಗಾರರಿಗೂ ಒಳ್ಳೆಯದಾಗಲಿ, ಕ್ರೀಡಾ ಸ್ಪೂರ್ತಿಯಿಂದ ಎಲ್ಲರೂ ಈ ಟೂರ್ನಿಯಲ್ಲಿ ಭಾಗವಹಿಸಿ ಎಂದು ಪ್ರಭಾಕರ್ ಹಾರೈಸಿದರು. ಈ ಸಂದರ್ಭದಲ್ಲಿ ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಟೂರ್ನಿಯ ಆಯೋಜಕ ಚೇತನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




