ಎಸ್‍ಐಆರ್ ಮೂಲಕ ಭಾರತವನ್ನು ಎರಡಾಗಿ ವಿಂಗಡಿಸುವ ಪ್ರಯತ್ನ: ಪ್ರಕಾಶ್ ರಾಜ್

ಬೆಂಗಳೂರು: ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆಯು ಬಡವರನ್ನು, ದಲಿತರನ್ನು, ಆದಿವಾಸಿಗಳನ್ನು, ಅಲ್ಪಸಂಖ್ಯಾತರನ್ನು, ಇವರ ಧರ್ಮದಲ್ಲದವರನ್ನು ಮತ ಹಕ್ಕಿನಿಂದ ವಂಚಿತರನ್ನಾಗಿಸುವುದು. ಇದು ಚುನಾವಣೆಯ ಸಮಸ್ಯೆಯೂ ಅಲ್ಲ, ಗೆಲ್ಲುವ ಸಮಸ್ಯೆಯೂ ಅಲ್ಲ, ಭಾರತವನ್ನು ಎರಡು ಭಾಗವಾಗಿ ವಿಂಗಡಿಸುವ ಪ್ರಯತ್ನ ಎಂದು ಬಹುಭಾಷಾ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆರೋಪಿಸಿದ್ದಾರೆ.
ಬುಧವಾರ ನಗರದ ಶಾಸಕರ ಭವನದಲ್ಲಿ ಎಸ್‍ಐಆರ್ ವಿರೋಧಿ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಎಸ್‍ಐಆರ್ ಪರಿಶೋಧನಾ ವರದಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್‍ಐಆರ್ ಬಿಜೆಪಿಯನ್ನು ಗೆಲ್ಲಿಸುವ ಹುನ್ನಾರ ಎಂದುಕೊಂಡರೆ ತಪ್ಪು. ಇವರಿಗೆ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಮುಸ್ಲಿಮರು, ಕ್ರಿಶ್ಚಿಯನ್ನರು ವೋಟ್ ಹಾಕುವುದು ಬೇಕಿಲ್ಲ. ಇದು ಮತದಾನದ ಸಮಸ್ಯೆ ಅಲ್ಲ, ಸಂವಿಧಾನ, ಸ್ವಾತಂತ್ರ್ಯವನ್ನು ಕೊಲೆ ಮಾಡುವ, ಪ್ರಜಾಪ್ರಭುತ್ವವನ್ನು ಅಳಿಸುವ ಪ್ರಯತ್ನ ಎಂದರು.
ಇತ್ತೀಚಿಗೆ ಎರಡು ರಾಜಕೀಯ ಬೆಳವಣಿಗೆಗಳು ನಡೆದಿವೆ. ಸರ್ವಾಧಿಕಾರದತ್ತ ಹೋಗುತ್ತಿದ್ದ ರೈಲನ್ನು ಇಬ್ಬರು ಹಳಿ ತಪ್ಪಿಸಿ, ಸತ್ಯವನ್ನು ಹೇಳಿದ್ದಾರೆ. ಒಂದು ಸಿಜೆಪಿ ಹೋರಾಟದ ಮೂಲಕ ಯುವಜನರು ಮಹಾಪ್ರಭು ರಂಗಾ-ಬಿಲ್ಲಾಗಳಿಗೆ ಹೆದರಿಕೆಯನ್ನು ಕೊಟ್ಟು, ಪ್ರಶ್ನಿಸಬಹುದೆನ್ನುವ ಧೈರ್ಯ ನೀಡಿದ್ದಾರೆ. ಮತ್ತೊಂದು, ಎಲ್ಲ ಮಾಧ್ಯಮಗಳನ್ನು ಕೊಂಡುಕೊಂಡು, ಬಾಯಿ ಮುಚ್ಚಿಸಿ, ನಮ್ಮ ಧ್ವನಿಯನ್ನು ತಗ್ಗಿಸಿದ ಸಮಯದಲ್ಲಿ ಅದೇ ಮಾಧ್ಯಮಗಳ ಮಧ್ಯದಿಂದ ಪತ್ರಕರ್ತೆಯೊಬ್ಬರು ಸರ್ವನಾಶದತ್ತ ಹೋಗುತ್ತಿದ್ದ ದೇಶವನ್ನು ಮತ್ತೆ ಹಳಿಗೆ ತಂದಿದ್ದಾರೆ ಎಂದು ಪ್ರಕಾಶ್ ರಾಜ್ ತಿಳಿಸಿದರು.
ನಮ್ಮ ಮುಂದೆ ಈಗಿರುವ ಬಹುದೊಡ್ಡ ಪ್ರಶ್ನೆಯೆಂದರೆ, ನಮ್ಮ ಅರ್ಜಿ-ನಮೂನೆಯನ್ನು ಭರ್ತಿಮಾಡಿಕೊಳ್ಳಿ, ಹೇಗಾದರೂ ಒಳಗೆ ಸೇರಿಸಿ, ಪ್ರಕ್ರಿಯೆಯನ್ನು ವಿಸ್ತರಿಸಿ ಎಂದಲ್ಲ; ಎಸ್‍ಐಆರ್ ಪ್ರಕ್ರಿಯೆ ಸಂಪೂರ್ಣ ರದ್ದಾಗಬೇಕು. ಪ್ರಕ್ರಿಯೆ ತಪ್ಪಾಗಿದೆ. ಅಷ್ಟೇ ಅಲ್ಲದೇ, ತಪ್ಪನ್ನು ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯಗಳಿವೆ. ಎಸ್‍ಐಆರ್ ಮತದಾರರನ್ನು ಹೊರಗೆ ತಳ್ಳುವ ಪ್ರಕ್ರಿಯೆ. ಚುನಾವಣಾ ಆಯೋಗದ ಆಯುಕ್ತರನ್ನು ಆರಿಸುವ ಪ್ರಕ್ರಿಯೆಯೇ ತಪ್ಪಾಗಿದೆ ಎಂದು ಅವರು ಹೇಳಿದರು.
ನಮೂನೆ-6 ಯಾರನ್ನು ಕೇಳಿ ಮಾಡಿದ್ರಿ? 18 ವರ್ಷದ ಯುವಕ ಅಥವಾ ಯುವತಿ ಪ್ರೌಢನಾದ ಮೇಲೆ, ‘ನನ್ನ ವಯಸ್ಸು 18 ಆಗಿದೆ, ನಾನು ಈ ಮನೇಲಿ ಇದ್ದೇನೆ’ ಅನ್ನೋದಕ್ಕೆ ದಾಖಲಾತಿ ಕೊಟ್ಟರೆ ಸಾಕು. ಅವರ ಅಪ್ಪ-ಅಮ್ಮನ ಜಾತಕ ನಿಮಗ್ಯಾಕೆ ಬೇಕು? 2002 ಮ್ಯಾಪಿಂಗ್ ಏನದು? ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿದವರು ಯಾರು, ನೀನು! 2002ರ ಮಾಹಿತಿ ಸರಿ ಮಾಡದೇ ಇರೋದರಿಂದ ಮ್ಯಾಪ್ ಆಗುತ್ತಿಲ್ಲ. ಮ್ಯಾಪ್ ಮಾಡುತ್ತಿರುವುದು ಯಾವುದೋ ಒಂದು ಯಂತ್ರ, ಮನುಷ್ಯರಲ್ಲ ಎಂದು ಪ್ರಕಾಶ್‍ರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಎಸ್‍ಐಆರ್ ವಿರುದ್ಧ ಹೋರಾಟ ಗೆಲ್ಲುವುದು ಜನರ ಪಾದ ಬೀದಿಗೆ ಇಳಿದಾಗ ಮಾತ್ರ. ಪ್ರಕ್ರಿಯೆಯನ್ನು ಸರಿ ಮಾಡಿಬಿಟ್ಟರೆ ಆಗಿಬಿಡುತ್ತದೆ, ಯಾರೋ ರಾಜೀನಾಮೆ ಮಾಡಿದರೆ ಆಗುತ್ತದೆ ಎನ್ನುವುದಲ್ಲ. 2023 ರಿಂದ ಇಲ್ಲಿಯ ತನಕ ಚುನಾವಣಾ ಆಯೋಗ ತೆಗೆದುಕೊಂಡ ನಿರ್ಧಾರಗಳು ಮತ್ತು ಅದರ ಪರಿಣಾಮಗಳ ಪರಿಶೋಧನೆ ಆಗಲೇಬೇಕು. ಆಯುಕ್ತರನ್ನು ಆರಿಸುವ ಪ್ರಕ್ರಿಯೆ ಬದಲಾಗಬೇಕು. ಹೊಸ ಚುನಾವಣಾ ಆಯೋಗ ರಚನೆಯಾಗಬೇಕು. ಡಿಲೀಟ್ ಆದ ಮತದಾರರನ್ನು ಪುನಃ ಮತಪಟ್ಟಿಗೆ ಸೇರಿಸಬೇಕು ಎಂದು ಅವರು ಆಗ್ರಹಿಸಿದರು.
ಸಂವಿಧಾನ, ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಪ್ರತಿಯೊಬ್ಬರು ರಸ್ತೆಗಿಳಿದಾಗ ಮಾತ್ರ ಸಾಧ್ಯವಾಗುತ್ತದೆ. ಅದಕ್ಕೆ ನಾವೆಲ್ಲರೂ ಸನ್ನದ್ಧರಾಗುವ ಕಾಲ ಬಂದಾಗಿದೆ. ಯುವಜನತೆ ಒಂದು ಸತ್ಯಾಗ್ರಹ ಅಥವಾ ಪ್ರತಿರೋಧಕ್ಕೆ ಎಷ್ಟು ಶಕ್ತಿ ಇದೆ ಎಂದು ತೋರಿಸಿದ್ದಾರೆ. ಈ ಚಲನೆಯನ್ನು ಉಪಯೋಗಿಸಿಕೊಂಡು ನಾವು ಅಹಿಂಸಾತ್ಮಕ, ಪ್ರೀತಿಯಿಂದ, ನಗುನಗುತ್ತಾ ರಸ್ತೆಗಿಳಿಯದಿದ್ದರೆ, ಎಸ್‍ಐಆರ್ ಎಂಬ ಮಹಾಮಾರಿಯನ್ನು, ಅದರ ಪ್ರಭಾವವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಪ್ರಕಾಶ್ ರಾಜ್ ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ, ನಿರ್ದೇಶಕ ಬಿ.ಸುರೇಶ್, ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್, ಎದ್ದೇಳು ಕರ್ನಾಟಕದ ಪದಾಧಿಕಾರಿ ನೂರ್ ಶ್ರೀಧರ್, ಹೋರಾಟಗಾರರಾದ ಕೆ.ಎಲ್.ಅಶೋಕ್, ಮುಹಮ್ಮದ್ ಯೂಸುಫ್ ಕನ್ನಿ, ವೀರಸಂಗಯ್ಯ, ಅಬ್ದುಲ್ ಮಜೀದ್, ತಾಹೇರ್ ಹುಸೇನ್, ಕೆ.ಎಸ್.ವಿಮಲಾ, ಕೆ.ವಿ.ಭಟ್, ಶಿವಸುಂದರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸೀತಾರಂ ಗುಂಡಪ್ಪ, ಇಂದಿರಮ್ಮ, ಪ್ರೊ.ವಿ.ಎಸ್.ಶ್ರೀಧರ, ಕುಮಾರ್ ಸಮತಳ, ಪ್ರೊ.ನಗರಿ ಬಾಬಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.






