ಬ್ಯಾರಿಸ್ ಸೆಂಟ್ರಲ್ ಕಮಿಟಿ ವತಿಯಿಂದ ಫೆ.1ರಂದು ಬೆಂಗಳೂರಿನಲ್ಲಿ ‘ಬ್ಯಾರಿ ಕೂಟ'

ಬೆಂಗಳೂರು: ಬೆಂಗಳೂರು ನಗರದಲ್ಲಿರುವ ಬ್ಯಾರಿ ಸಮುದಾಯದವರೆಲ್ಲರನ್ನೂ ಒಂದೇ ವೇದಿಕೆಯಡಿ ಒಟ್ಟುಗೂಡಿಸುವ ಉದ್ದೇಶದೊಂದಿಗೆ ಬ್ಯಾರಿಸ್ ಸೆಂಟ್ರಲ್ ಕಮಿಟಿ ವತಿಯಿಂದ ಫೆ.1ಕ್ಕೆ ನಗರದ ಅರಮನೆ ಮೈದಾನದಲ್ಲಿ ‘ಬ್ಯಾರಿ ಕೂಟ-2026' ಅನ್ನು ಆಯೋಜಿಸಲಾಗಿದೆ ಎಂದು ಕಮಿಟಿ ಅಧ್ಯಕ್ಷ ಶಬೀರ್ ಬ್ರಿಗೇಡ್ ತಿಳಿಸಿದ್ದಾರೆ.
ಗುರುವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಬ್ಯಾರಿ ಕೂಟದ ವಿಶೇಷತೆಯಾಗಿ ಕಾರ್ಯಕ್ರಮದಲ್ಲಿ 10 ಲಕ್ಷ ರೂ. ಮೌಲ್ಯದ ವಿದ್ಯಾರ್ಥಿ ವೇತನ ವಿತರಣೆ, ಆಂಬ್ಯುಲೆನ್ಸ್ ಲೋಕಾರ್ಪಣೆ ನಡೆಯಲಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಬ್ಯಾರಿ ಸಮುದಾಯದ ಮಕ್ಕಳು, ಮಹಿಳೆಯರು, ಯುವಕರಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸ್ಪೀಕರ್ ಯು.ಟಿ.ಖಾದರ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್., ಶಾಸಕರಾದ ರಿಝ್ವಾನ್ ಅರ್ಶದ್, ಸಚಿವ ಝಮೀರ್ ಅಹ್ಮದ್ ಖಾನ್, ಬ್ಯಾರಿ ಸಮುದಾಯದ ವಿವಿಧ ಉದ್ಯಮಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಶಬೀರ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಮಿಟಿಯ ಪದಾಧಿಕಾರಿಗಳಾದ ನಾಸಿರ್ ಕೆಂಪಿ, ಗಫೂರ್, ರಿಫಾಯಿ, ಬಶೀರ್ ಅಡ್ಯನಡ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.







