Bengaluru | ರಾಗಾಆವಿವಿಯಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಬೆಂಗಳೂರು: ಯೋಗವು ಕೇವಲ ಒಂದು ದಿನದ ಆಚರಣೆಯಾಗದೆ, ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕು. ಮಾನಸಿಕ ಹಾಗೂ ಶಾರೀರಿಕ ಯೋಗಕ್ಷೇಮಕ್ಕೆ ಯೋಗ ಸಹಾಯಕಾರಿ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಭಗವಾನ್ ಬಿ.ಸಿ ಅಭಿಪ್ರಾಯಪಟ್ಟರು.
12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಭಾನುವಾರ ಬೆಳಿಗ್ಗೆ 7 ರಿಂದ 7.40ರವರೆಗೆ ನಡೆದ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕ ಜೀವನಶೈಲಿಯಿಂದ ಉಂಟಾಗುವ ಮಾನಸಿಕ ಒತ್ತಡ ಹಾಗೂ ಆತಂಕದಿಂದ ಮುಕ್ತರಾಗಲು ಯೋಗ ಅತ್ಯುತ್ತಮ ಸಾಧನವಾಗಿದೆ. ಯೋಗಾಭ್ಯಾಸದ ಮೂಲಕ ಆರೋಗ್ಯಕರ ಜೀವನ, ಮಾನಸಿಕ ಸಮತೋಲನ ಹಾಗೂ ಏಕಾಗ್ರತೆಯನ್ನು ಸಾಧಿಸಬಹುದು. ಅಲ್ಲದೆ, ಮಾನಸಿಕ ಮತ್ತು ಭಾವನಾತ್ಮಕ ಸ್ಥಿರತೆಯನ್ನು ಇದು ವೃದ್ಧಿಸುತ್ತದೆ. ದೇಹಕ್ಕೆ ಮುಪ್ಪು ಬಂದರೂ ಮನಸ್ಸು ಚೈತನ್ಯದಿಂದ ಇರಲು ಯೋಗ ನೆರವಾಗುತ್ತದೆ. ಆದ್ದರಿಂದ ಯೋಗವನ್ನು ಪ್ರತಿದಿನದ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಯೋಗವು ಮನಸ್ಸು, ದೇಹ, ಆತ್ಮ ಹಾಗೂ ನಿಸರ್ಗದ ನಡುವಿನ ಸಮನ್ವಯವನ್ನು ಸಾಧಿಸುವ ಭಾರತೀಯ ಜ್ಞಾನ ಪರಂಪರೆಯ ಅಮೂಲ್ಯ ಕೊಡುಗೆಯಾಗಿದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯೋಗ ಪ್ರಮುಖ ಸಾಧನವಾಗಿದ್ದು, ಯುವಜನತೆ ಯೋಗದತ್ತ ಹೆಚ್ಚಿನ ಆಸಕ್ತಿ ತೋರಬೇಕು ಎಂದು ಅವರು ಕರೆ ನೀಡಿದರು.
ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕಳೆದ ಹತ್ತು ದಿನಗಳಿಂದ ವಿಶೇಷ ಯೋಗ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎಸ್‌ಡಿಎಂ ಯೋಗ ಮತ್ತು ನ್ಯಾಚುರೋಪಥಿ ಸಂಸ್ಥೆ ಹಾಗೂ ರಾಜ್ಯದ ಇತರ ನ್ಯಾಚುರೋಪಥಿ ಕಾಲೇಜುಗಳ ಯೋಗಪಟುಗಳು ಮತ್ತು ತಜ್ಞರು ತರಬೇತಿ ನೀಡಿದರು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ವಿವಿಧ ಆರೋಗ್ಯ ವಿಜ್ಞಾನ ಸಂಸ್ಥೆಗಳ ಪ್ರತಿನಿಧಿಗಳು ಇದರ ಪ್ರಯೋಜನ ಪಡೆದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯೋಜನೆಯಲ್ಲಿ ರಾಜ್ಯದ ಸುಮಾರು 600 ಆರೋಗ್ಯ ವಿಜ್ಞಾನ ಸಂಸ್ಥೆಗಳ 45 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಏಕಕಾಲದಲ್ಲಿ ಯೋಗಾಭ್ಯಾಸ ನಡೆಸಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಯೋಗ ತರಬೇತುದಾರರು ಉಪಸ್ಥಿತರಿದ್ದರು.






