ಎಟಿಎಂಗೆ ತುಂಬಬೇಕಿದ್ದ 1.37 ಕೋಟಿ ರೂ.ಹಣ ವಂಚನೆ ಆರೋಪ: ಆರು ಮಂದಿ ವಿರುದ್ಧ ಎರಡು ಪ್ರತ್ಯೇಕ ಎಫ್‍ಐಆರ್ ದಾಖಲು

ಬೆಂಗಳೂರು: ಇತ್ತೀಚೆಗೆ ನಡೆದಿದ್ದ 7.11 ಕೋಟಿ ರೂಪಾಯಿ ಹಣ ದರೋಡೆ ಪ್ರಕರಣ ಮಾಸುವ ಮುನ್ನವೇ ಅಂಥಹದ್ದೇ ಮತ್ತೆರಡು ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿದೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎಟಿಎಂಗೆ ತುಂಬಿಸಲು ನೀಡಲಾಗಿದ್ದ 1.37 ಕೋಟಿ ರೂ. ವಂಚಿಸಲಾಗಿದ್ದು, ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಆರು ಮಂದಿ ವಿರುದ್ಧ ಜ.19ರಂದು ಎರಡು ಎಫ್‍ಐಆರ್ ಗಳು ದಾಖಲಾಗಿವೆ.
ಒಂದು ಪ್ರಕರಣದಲ್ಲಿ ಮಿಥುನ್ ಎಂಬವರು ಏಜೆನ್ಸಿ ಸಿಬ್ಬಂದಿಗಳಾದ ಪ್ರವೀಣ್, ಧನಶೇಖರ್, ರಾಮಕ್ಕ ಮತ್ತು ಹರೀಶ್‍ಕುಮಾರ್ ಎಂಬವರ ವಿರುದ್ಧ 57 ಲಕ್ಷ ರೂಪಾಯಿ ವಂಚಿಸಿರುವ ಆರೋಪದಡಿ ದೂರು ನೀಡಿದರೆ, ಮತ್ತೊಂದು ಪ್ರಕರಣದಲ್ಲಿ ನಾಗಾರ್ಜುನ್ ಎಂಬುವರು ಹರೀಶ್ ಕುಮಾರ್, ಪ್ರವೀಣ್ ಕುಮಾರ್ ಮತ್ತು ವರುಣ್ ವಿರುದ್ಧ 80 ಲಕ್ಷ ರೂಪಾಯಿ ವಂಚಿಸಿದ ಆರೋಪದಡಿ ದೂರು ನೀಡಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ಆರೋಪಿ ಹರೀಶ್ ಕುಮಾರ್ ಎಂಬಾತನ ಹೆಸರು ಉಲ್ಲೇಖಿತವಾಗಿದೆ.
ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಟಾಚಿ ಪೇಮೆಂಟ್ ಸರ್ವಿಸ್ ಪ್ರೈ.ಲಿ ಎಂಬ ಎಟಿಎಂಗೆ ಹಣ ತುಂಬುವ ಏಜೆನ್ಸಿ ಇದ್ದು, ಇವರು ಎಸ್‍ಬಿಐ, ಆಕ್ಸಿಸ್ ಬ್ಯಾಂಕ್ ಮತ್ತು ಇತರೆ ಬ್ಯಾಂಕ್‍ಗಳೊಂದಿಗೆ ಎಟಿಎಂಗಳಿಗೆ ಹಣ ತುಂಬುವ ಕೆಲಸ ನಿರ್ವಹಿಸುತ್ತಾರೆ.
ಸದ್ಯ, ಈ ಏಜೆನ್ಸಿಯ ಸಿಬ್ಬಂದಿ ಎಟಿಎಂಗಳಿಗೆ ತುಂಬದೇ ವಂಚಿಸಿರುವ ಬಗ್ಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.





