ಬೆಂಗಳೂರಿನಲ್ಲಿ ನಿಯಮ ಉಲ್ಲಂಘಿಸಿದ 14 ಪಿಜಿಗಳಿಗೆ ಬೀಗ

ಸಾಂದರ್ಭಿಕ ಚಿತ್ರ | PC : gemini AI
ಬೆಂಗಳೂರು : ಮಂಗಳವಾರದಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಅಧಿಕಾರಿಗಳು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿದ್ದ 14 ಪಿಜಿಗಳಿಗೆ(ಪೇಯಿಂಗ್ ಗೆಸ್ಟ್) ಬೀಗ ಹಾಕಿದ್ದಾರೆ.
ಪಟ್ಟಂದೂರು ಅಗ್ರಹಾರದಲ್ಲಿರುವ ಎಸ್.ವಿ.ಕೆ. ಪಿಜಿ, ವಂಶಿ ಕೃಷ್ಣ ಪಿಜಿ, ಲಕ್ಷ್ಮಿನಾರಾಯಣಪುರದ ಡ್ವೆಲ್ ಕೋ-ಲಿವಿಂಗ್ ಪಿಜಿ, ವೈಟ್ಫೀಲ್ಡ್ ನ ರಾಯಲ್ ಹೋಮ್ ಸ್ಟೇಸ್ ಪಿಜಿ, ಡ್ರೀಮ್ ಲ್ಯಾಂಡ್ ಪಿಜಿ, ಝೋಲೋ ಅಸ್ಮಿ ಜೆಂಟ್ಸ್ ಪಿಜಿ, ಮಾರತ್ಹಳ್ಳಿಯ ಕೆ.ಆರ್.ಜೆಂಟ್ಸ್ ಪಿಜಿಗೆ ಬೀಗ ಹಾಕಲಾಗಿದೆ.
ಕೆ.ಆರ್.ಪುರಂನ ಎಸ್.ಎಲ್.ವಿ ಕಂಫರ್ಟ್ಸ್ ಜೆಂಟ್ಸ್ ಪಿಜಿ, ಗಣೇಶ ಜೆಂಟ್ಸ್ ಪಿ.ಜಿ., ಎಸ್.ಎಸ್.ವಿ ಟವರ್ ಪಿಜಿ, ಬಿ ನಾರಾಯಣಪುರದ ಬ್ಲಿಸ್ ಕೋ-ಲಿವಿಂಗ್ ಪಿ.ಜಿ. ವಿ.ಡಿ.ಎಸ್ ಲಕ್ಸುರಿ ಪಿಜಿ ಫಾರ್ ಲೇಡೀಸ್, ದೂರವಾಣಿನಗರದ ಸೆಂಟ್ ಮರಿಯಾ ಲೇಡೀಸ್ ಪಿಜಿ, ಎಸ್.ಜಿ. ಜೆಂಟ್ಸ್ ಅಂಡ್ ಲೇಡೀಸ್ ಪಿಜಿಗೆ ಬೀಗ ಹಾಕಲಾಗಿದೆ.
ಸಾರ್ವಜನಿಕ ಆರೋಗ್ಯ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಪಡೆಯದೇ ಎಸ್.ಒ.ಪಿ. ಮಾನದಂಡಗಳನ್ನು ಉಲ್ಲಂಘಿಸಿ, ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಪಿಜಿಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇನ್ನು ಪಾಲಿಕೆ ವ್ಯಾಪ್ತಿಯಲ್ಲಿ ನ.10ರಿಂದ ನ.15ರವರೆಗೆ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನ ನಡೆಸಲಾಗಿದ್ದು, ಈ ಅವಧಿಯಲ್ಲಿ ನಗರ ಪಾಲಿಕೆಯ 17 ವಾರ್ಡ್ಗಳ ವ್ಯಾಪ್ತಿಯಲ್ಲಿ 466 ಉದ್ದಿಮೆದಾರರು ಒಟ್ಟು 25,52,800 ರೂ. ಶುಲ್ಕ ಪಾವತಿಸಿ, ಉದ್ದಿಮೆ ಪರವಾನಗಿಯನ್ನು ಪಡೆದುಕೊಂಡಿದ್ದಾರೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಪ್ರಕಟನೆಯಲ್ಲಿ ತಿಳಿಸಿದೆ.







