Bengaluru | ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವತಿಯ ಹಿಂಬಾಲಿಸಿ ಕಿರುಕುಳ; ಮೂವರ ಬಂಧನ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಪ್ರಕರಣದಡಿ ಮೂವರನ್ನು ಇಲ್ಲಿನ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಲ್ಲಿ 18 ವರ್ಷದ ಓರ್ವ ಗ್ಯಾರೇಜ್ ಕೆಲಸ ಮಾಡುತ್ತಿದ್ದು, 19 ವರ್ಷದ ಇತರ ಇಬ್ಬರು ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 24ರಂದು ದ್ವಿಚಕ್ರ ವಾಹನದಲ್ಲಿ ಜಯನಗರ ಮೆಟ್ರೋ ನಿಲ್ದಾಣದಿಂದ ಬಿಟಿಎಂ ಲೇಔಟ್ ಕಡೆಗೆ ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಆರೋಪಿಗಳು ಕಿರುಕುಳ ನೀಡಿದ್ದರು. ಘಟನೆಯ ವಿಡಿಯೋವನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಫೋನ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದರು.
ಯುವತಿಯನ್ನು ಪತ್ತೆ ಹಚ್ಚಿ ಆಕೆಯ ದೂರಿನ ಆಧಾರದ ಮೇಲೆ ಎಸ್.ಜಿ.ಪಾಳ್ಯ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ(ಬಿಎನ್ಎಸ್)ಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು. ಸದ್ಯ, ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.





