Bengaluru | ಕೆಲಸಕ್ಕಿದ್ದ ಮನೆಯಲ್ಲೇ ಕಳ್ಳತನ: ಮಹಿಳೆಯ ಬಂಧನ, 35 ಲಕ್ಷ ರೂ.ಮೌಲ್ಯದ ಬೆಳ್ಳಿ ಸಾಮಗ್ರಿ ವಶ

ಸಾಂದರ್ಭಿಕ ಚಿತ್ರ | PC : gemini AI
ಬೆಂಗಳೂರು, ಫೆ.27 : ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ್ದ ಮಹಿಳೆಯೊಬ್ಬಳನ್ನು ಇಲ್ಲಿನ ಜೀವನ್ ಭೀಮಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಮೂಲದ ಚೈತ್ರಾ(34) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಹಿಂದಿನ ಒಂದು ವರ್ಷದಿಂದ ಹಂತಹಂತವಾಗಿ ಕಳ್ಳತನ ಮಾಡಿದ್ದ ಮಹಿಳೆಯಿಂದ ಸುಮಾರು 35 ಲಕ್ಷ ರೂ. ಮೌಲ್ಯದ 12.5 ಕೆ.ಜಿ. ಬೆಳ್ಳಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರ ಸರ್ಜನ್ ಒಬ್ಬರ ಮನೆಯಲ್ಲಿ ಒಂದೂವರೆ ವರ್ಷದಿಂದ ಚೈತ್ರಾ ಮನೆ ಕೆಲಸ ಮಾಡಿಕೊಂಡಿದ್ದಳು. ಮಾಲಕರು ಮನೆಯ ಮಹಡಿಯ ಮೇಲಿದ್ದ ಕೊಠಡಿಯೊಂದರಲ್ಲಿ ಬೆಳ್ಳಿಯ ಪಾತ್ರೆ ಹಾಗೂ ಪೂಜಾ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದರು. ಆ ಸಾಮಗ್ರಿಗಳನ್ನು ಕೇವಲ ಹಬ್ಬದ ಸಂದರ್ಭಗಳಲ್ಲಿ ಮಾತ್ರ ಹೊರತೆಗೆಯಲಾಗುತ್ತಿತ್ತು. ಇದನ್ನೇ ಬಂಡವಾಳವಾಗಿಸಿಕೊಂಡಿದ್ದ ಚೈತ್ರಾ, ಮಾಲಕರಿಗೆ ತಿಳಿಯದಂತೆ ಮಹಡಿಯಲ್ಲಿದ್ದ ಬೆಳ್ಳಿ ಸಾಮಗ್ರಿಗಳನ್ನು ಒಂದೊಂದಾಗಿ ಕದಿಯಲು ಆರಂಭಿಸಿದ್ದಳು ಎನ್ನಲಾಗಿದೆ.
ಹಿಂದಿನ ಒಂದು ವರ್ಷದಿಂದ ಹಂತ ಹಂತವಾಗಿ ಒಟ್ಟು 12.5 ಕೆ.ಜಿ. ತೂಕದ ಬೆಳ್ಳಿ ಪಾತ್ರೆಗಳನ್ನು ಎಗರಿಸಿದ್ದಳು. 2025ರ ದೀಪಾವಳಿ ಹಬ್ಬಕ್ಕೂ ಕೆಲವು ದಿನಗಳ ಮೊದಲೇ ಚೈತ್ರಾ ಇದ್ದಕ್ಕಿದ್ದಂತೆ ಕೆಲಸ ಬಿಟ್ಟಿದ್ದಳು. ಹಬ್ಬದ ಪೂಜೆಗಾಗಿ ಮನೆಯವರು ಬೆಳ್ಳಿ ಪಾತ್ರೆಗಳಿದ್ದ ಚೀಲವನ್ನು ತೆರೆದಾಗ ಕಳ್ಳತನದ ಕೃತ್ಯ ಬಯಲಾಗಿತ್ತು. ತಕ್ಷಣ ಮಾಲಕರು ಜೀವನ್ ಭಿಮಾ ನಗರ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಜೀವನ್ ಭೀಮಾ ನಗರ ಪೊಲೀಸರು ತನಿಖೆ ಕೈಗೊಂಡಾಗ, ಹಳೆಯ ಕೆಲಸದವರ ಮೇಲೆ ಅನುಮಾನ ವ್ಯಕ್ತವಾಗಿತ್ತು. ಚೈತ್ರಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಂದಿದೆ. ಪತಿ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದುದರಿಂದ ಚಿಕಿತ್ಸೆಗೆ ಹೆಚ್ಚಿನ ಹಣದ ಅವಶ್ಯಕತೆ ಇತ್ತು. ಆದ್ದರಿಂದ ಬೆಳ್ಳಿ ಸಾಮಗ್ರಿಗಳನ್ನು ಕದ್ದು ಅಡವಿಟ್ಟು ಹಣ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.







