Bengaluru | ಪೂಜೆಯ ನೆಪದಲ್ಲಿ 2.5 ಕೋಟಿ ರೂ. ವಂಚನೆ ಆರೋಪ; ಮೂವರ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು : ಪೂಜೆಯ ನೆಪದಲ್ಲಿ ಚಾಮರಾಜಪೇಟೆ ನಿವಾಸಿ ಮಹಿಳೆಯೊಬ್ಬರಿಗೆ 2.5 ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳ ವಿರುದ್ಧ ಕೇಂದ್ರ ಅಪರಾಧ ಶಾಖೆಯಲ್ಲಿ(ಸಿಸಿಬಿ) ಎಫ್‌ಐಆರ್ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬಾ ಎಂದು ಹೇಳಲಾಗಿರುವ ಅಪ್ಸರ್ ಪಾಷಾ ಹಾಗೂ ಮಧ್ಯವರ್ತಿಗಳಾದ ಶಂಕರ್ ಮತ್ತು ಭರತ್ ವಿರುದ್ಧ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ವಿವಿಧ ಆಯಾಮಗಳ ಕುರಿತು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಹಣ ಕಳೆದುಕೊಂಡ ಮಹಿಳೆ ಕುಮುದಾ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಚಾಮರಾಜಪೇಟೆಯಲ್ಲಿ ವಾಸವಾಗಿದ್ದಾರೆ. ಅವರ ಪುತ್ರ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ. ‘ಕುಮುದಾ ಅವರ ಮನೆಗೆ ದುಷ್ಟಶಕ್ತಿಗಳು ಪ್ರವೇಶಿಸಿದ್ದರಿಂದಲೇ ಮಗನಿಗೆ ಅನಾಹುತವಾಗಿದೆ’ ಎಂದು ಆರೋಪಿಗಳು ನಂಬಿಸಿದ್ದರು ಎಂದು ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮನೆಯ ಮೇಲೆ ಸಾಲ ಪಡೆಯುವ ವಿಚಾರದಲ್ಲಿ ಪರಿಚಯವಾಗಿದ್ದ ಮಧ್ಯವರ್ತಿಗಳ ಶಂಕರ್ ಮತ್ತು ಭರತ್ ಅವರ ಮೂಲಕ ಕುಮುದಾ ಅವರಿಗೆ ಅಪ್ಸರ್ ಪಾಷಾ ಎಂಬಾತನ ಬಗ್ಗೆ ತಿಳಿಯಿತು. ಬಳಿಕ ಆರೋಪಿಗಳು ಕುಮುದಾ ಅವರ ಮನೆಯಲ್ಲಿ ವಿಶೇಷ ಪೂಜೆ ನಡೆಸುವ ನೆಪದಲ್ಲಿ 8 ಲಕ್ಷ ರೂ. ಪಡೆದಿದ್ದರು ಎನ್ನಲಾಗಿದೆ.
ನಂತರ ಆರೋಪಿಗಳು ಮತ್ತಷ್ಟು ಹಣ ನೀಡುವಂತೆ ಕುಮುದಾ ಅವರನ್ನು ನಂಬಿಸಿದ್ದಾರೆ ಎನ್ನಲಾಗಿದೆ. ರಿಸರ್ವ್ ಬ್ಯಾಂಕ್‌ನಿಂದ 500 ಕೋಟಿ ರೂ. ಬರಲಿದೆ. ಆ ಹಣವನ್ನು ಪಡೆಯಲು ತಕ್ಷಣ ಹಣದ ಅಗತ್ಯವಿದೆ ಎಂದು ಹೇಳಿದ ಆರೋಪಿಗಳು, 2.5 ಕೋಟಿ ರೂ. ಸಾಲವಾಗಿ ನೀಡಿದರೆ ಬಳಿಕ 10 ಕೋಟಿ ರೂ. ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಕುಮುದಾ, ಚಾಮರಾಜಪೇಟೆಯಲ್ಲಿದ್ದ ತಮ್ಮ ಮನೆಯನ್ನು 8.5 ಕೋಟಿ ರೂ.ಗೆ ಮಾರಾಟ ಮಾಡಿ, ಅದರಲ್ಲಿ 2.5 ಕೋಟಿ ರೂ.ಗಳನ್ನು ಆರೋಪಿಗಳಿಗೆ ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.






