Bengaluru | ಪಂಚ ತಾರಾ ಹೋಟೆಲ್ಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ದಾಳಿ: ಅವಧಿ ಮೀರಿದ ಆಹಾರ, ಕೊಳೆತ ತರಕಾರಿ ಪತ್ತೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ಆರೋಗ್ಯ ಸಚಿವ ಯು.ಟಿ.ಖಾದರ್ ಮಾರ್ಗದರ್ಶನದಲ್ಲಿ ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ವ್ಯಾಪ್ತಿಯ ತಾರಾ ಹೊಟೇಲ್ಗಳ ಮೇಲೆ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಆಹಾರದ ಮಾದರಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆಯಲ್ಲಿ ಅವಧಿ ಮೀರಿದ ಆಹಾರ ಹಾಗೂ ಕೊಳೆತ ತರಕಾರಿಗಳು ಪತ್ತೆಯಾಗಿವೆ.
3 ಸ್ಟಾರ್ ಮತ್ತು 5 ಸ್ಟಾರ್ ಹೋಟೆಲ್ಗಳಲ್ಲಿನ ಆಹಾರದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಇಲಾಖೆಗೆ ದೂರುಗಳು ಸಲ್ಲಿಕೆಯಾಗಿದ್ದವು. ಅದರಂತೆ ಅಧಿಕಾರಿಗಳ 30 ತಂಡಗಳು ಬೆಂ.ನಗರ ಜಿಲ್ಲೆ ಹಾಗೂ ಜಿಬಿಎ ವ್ಯಾಪ್ತಿಯ 26 ತಾರಾ ಹೊಟೇಲ್ಗಳಲ್ಲಿ ಆಹಾರದ ಮಾದರಿಗಳನ್ನು ಪರಿಶೀಲಿಸಲಾಗಿದೆ. ಈ ಪರಿಶೀಲನೆ ವೇಳೆ ಲೇಬಲ್ ಇಲ್ಲದಿರುವುದು, ಅವಧಿ ಮೀರಿದ ಮಾಂಸ, ಹಾಲು ಹಾಗೂ ಆಹಾರದ ಉತ್ಪನ್ನಗಳ ಮಾದರಿಗಳು, ಕೊಳೆತ ತರಕಾರಿಗಳು, ಕಳಪೆ ಗುಣಮಟ್ಟದ ಆಹಾರ ಮಾದರಿಗಳು ಪತ್ತೆಯಾಗಿವೆ.
ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಹೊಟೇಲ್ಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಮಾಡಲಾಗಿದೆ. ಕೆಲ ಹೊಟೇಲ್ಗಳ ಮೇಲೆ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಲೂ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ. ಅಡುಗೆ ಕೊಠಡಿ, ದಾಸ್ತಾನು ಕೇಂದ್ರ ಮತ್ತು ಶುಚಿತ್ವವನ್ನು ಅಧಿಕಾರಿಗಳು ಪರಿಶೀಲಿಸಿದರು. ಚಹಾ ಪುಡಿ, ಕೋಳಿ ಮಾಂಸ, ಮಟನ್, ಮೀನು, ಅಡುಗೆ ಎಣ್ಣೆ, ಮೆಣಸಿನ ಪುಡಿ, ಅರಿಶಿನ ಪುಡಿ, ಟೊಮೆಟೊ ಸಾಸ್, ನಿಂಬೆ ರಸ, ಚೀಸ್, ಪಾಪಡ್, ಗೋಡಂಬಿ, ಶುಂಠಿ, ಕಾಳುಮೆಣಸಿನ ಪುಡಿ, ಮಸಾಲೆ ಪುಡಿ, ಹಾಲು ಸೇರಿ ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಅಧಿಕಾರಿಗಳು ವಿಶ್ಲೇಷಣೆಗೆ ಪ್ರಯೋಗಾಲಯಗಳಿಗೆ ಕಳುಹಿಸಿದ್ದಾರೆ.
ತಪಾಸಣೆ ವೇಳೆಯಲ್ಲಿ ಅಡುಗೆಮನೆ ಹಾಗೂ ಆಹಾರ ಸಂಗ್ರಹಣಾ ಸ್ಥಳಗಳಲ್ಲಿ ಸ್ವಚ್ಛತೆ ಇಲ್ಲದಿರುವುದು, ಮಾಂಸ ಉತ್ಪನ್ನಗಳ ವಿವರವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ನಿಯಮಗಳಿಗೆ ಅನುಗುಣವಾಗಿ ಮುದ್ರಿಸದಿರುವುದು, ಅವಧಿ ಮೀರಿದ ಹಾಲಿನ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಕೋಳಿ ಮಾಂಸ, ಮೀನು, ಮಾಂಸ ಹಾಗೂ ತರಕಾರಿಗಳನ್ನು ಸಂಗ್ರಹಿಸಿಟ್ಟಿರುವುದು, ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರ ಪದಾರ್ಥಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿಡದಿರುವುದು, ಶಿಲೀಂಧ್ರ ಬಾಧಿತ ತರಕಾರಿ ಮತ್ತು ಆಹಾರ ಪದಾರ್ಥಗಳ ಸಂಗ್ರಹಣೆ ಮಾಡಿರುವ ಪ್ರಮುಖ ಉಲ್ಲಂಘನೆಗಳು ಕಂಡು ಬಂದಿದೆ ಎಂದು ಎಂದು ಇಲಾಖೆ ಆಯುಕ್ತ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.






