Bengaluru | ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಜೈಲ್ ಭರೋ ಚಳುವಳಿ: ಧರಣಿನಿರತರ ಬಂಧನ, ಬಿಡುಗಡೆ

ಬೆಂಗಳೂರು : ವಿಬಿ ಜಿ ಗ್ರಾಮ್ ಜಿ ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯ್ದೆ ರದ್ಧತಿ ಮತ್ತು ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಸೇರಿ ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಕ್ವಿಟ್ ಇಂಡಿಯಾ ಚಳುವಳಿ ಸ್ಮರಣಾರ್ಥವಾಗಿ ಸಂಯುಕ್ತ ಹೋರಾಟ-ಕರ್ನಾಟಕ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಸೋಮವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಜೈಲ್ ಭರೋ ಚಳುವಳಿಯನ್ನು ನಡೆಸಲಾಯಿತು.
1942ರಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ನಿರ್ಣಾಯಕ ಹೋರಾಟವನ್ನು ನಡೆಸಲಾಗಿತ್ತು. ಆದರೆ, ಪ್ರಸಕ್ತ ಸಂದರ್ಭದಲ್ಲಿ ಸುಲಿಗೆ ಕೋರ ಬಹುರಾಷ್ಟ್ರೀಯ ಕಂಪೆನಿಗಳೇ ದೇಶ ಬಿಟ್ಟು ತೊಲಗಿ ಎನ್ನಬೇಕಾಗಿದೆ. ಡಾ.ಸ್ವಾಮಿನಾಥನ್ ವರದಿಯ ಶಿಫಾರಸಿನಂತೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಶಾಸನವನ್ನು ಕೇಂದ್ರ ಸರಕಾರ ಇನ್ನು ರೂಪಿಸಿಲ್ಲ. ಜೊತೆಗೆ ವಿವಿಧ ದೇಶಗಳೊಡನೆ ಮುಕ್ತ ವಾಣಿಜ್ಯ ಒಪ್ಪಂದವನ್ನು ಎಫ್‍ಟಿಎ ಮಾಡಿಕೊಳ್ಳಲಾಗಿದೆ ಇದು ಕೃಷಿ ಹಾಗೂ ರೈತ ವಿರೋಧಿ ನೀತಿಗಳಾಗಿದೆ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.
ಅದೇ ರೀತಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಾದ ಮನ್ರೇಗಾ ಯೋಜನೆಯನ್ನು ಬದಲಾಯಿಸಲಾಗಿದೆ. ಇದರಿಂದ ಗ್ರಾಮೀಣ ಉದ್ಯೋಗಗಳು ದೊರಕದಂತಾಗಿದೆ. ವಿದ್ಯುತ್ ಬಿಲ್-2026 ಹಾಗೂ ಬೀಜ ಮಸೂದೆಗಳು ರೈತ ಹಾಗೂ ಕಾರ್ಮಿಕ ವಿರೋಧಿಯಾಗಿದ್ದು, ಕೂಡಲೇ ಅವುಗಳನ್ನು ರದ್ಧು ಮಾಡಬೇಕು ಎಂದು ಧರಣಿನಿರತರು ಒತ್ತಾಯಿಸಿದರು.
ರಾಜ್ಯ ಸರಕಾರ ಕೂಡ ನಾಲ್ಕು ಲೇಬರ್ ಕೋಡ್‍ಗಳಿಗೆ ಕಾನೂನನ್ನು ರಚಿಸುವಾಗ ಕಾರ್ಮಿಕರ ಪರವಾಗಿ ರೂಪಿಸಬೇಕು ಮತ್ತು ಜಾರಿಗೊಂಡ ಕನಿಷ್ಠ ವೇತನವನ್ನು ಈ ಕೂಡಲೇ ಜಾರಿಗೊಳಿಸಬೇಕು. ರಾಜ್ಯದ ವಿವಿಧಡೆ ನಡೆಯುತ್ತಿರುವ ಕೃಷಿ ಜಮೀನಿನ ಸ್ವಾಧೀನವನ್ನು ಕೈಬಿಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಈ ಧರಣಿ ಸಭೆಯಲ್ಲಿ ಪ್ರತಿಭಟನೆಯಲ್ಲಿ ಜೆಸಿಟಿಯು ಮುಖಂಡ ಕೆ.ವಿ.ಭಟ್, ಕೆಪಿಆರ್ ಎಸ್ ಮುಖಂಡ ಯಶವಂತ್, ಸಿಐಟಿಯು ಮುಖಂಡ ಉಮೇಶ್, ಎಐಟಿಯುಸಿ ಮುಖಂಡ ಹನುಮಂತಪ್ಪ ಸೇರಿದಂತೆ ವಿವಿಧ ರೈತ ಹಾಗೂ ಕಾರ್ಮಿಕ ಮುಖಂಡರು ಮಾತನಾಡಿದರು. ಕೊನೆಗೆ ಧರಣಿನಿರತರು ಫ್ರೀಡಂ ಪಾರ್ಕ್‍ನ ಬಳಿ ರಸ್ತೆ ತಡೆಯಲು ಮುಂದಾದಾಗ ಪೊಲೀಸರು ಬಂಧಿಸಿ ತದನಂತರ ಬಿಡುಗಡೆಗೊಳಿಸಿದರು.






