Bengaluru | ಪೌರಕಾರ್ಮಿಕನ ಮೇಲೆ ಕಲ್ಲು ಎಸೆದು ಹಲ್ಲೆ ಆರೋಪ: ಕೇರಳ ಮೂಲದ ಯುವತಿ ಮೇಲೆ ಪ್ರಕರಣ ದಾಖಲು

ಬೆಂಗಳೂರು : ಕೇರಳ ಮೂಲದ ಯುವತಿಯೊಬ್ಬಳು ಪೌರಕಾರ್ಮಿಕನ ಮೇಲೆ ಕಲ್ಲು ಎಸೆದು ಹಲ್ಲೆ ನಡೆಸಿರುವ ಘಟನೆ ನಗರದ ಪಟ್ಟಂದೂರು ಅಗ್ರಹಾರದ ಕುವೆಂಪು ರಸ್ತೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಈ ಕುರಿತು ವೈಟ್‍ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿದ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇರಳ ಮೂಲದ ವೈದೇಹಿ ಎಂಬುವವರು ಹಲ್ಲೆ ಮಾಡಿದ ಯುವತಿ ಎಂದು ತಿಳಿದು ಬಂದಿದೆ. ಗೆಳೆಯನ ಜೊತೆ ರಸ್ತೆಬದಿಯಲ್ಲಿ ಚಹಾ ಕುಡಿಯುತ್ತಿದ್ದ ಯುವತಿ ಹಾಗೂ ಯುವಕ, ಕಾಗದ ಲೋಟವನ್ನು ರಸ್ತೆಬದಿಗೆ ಎಸೆದಿದ್ದಾರೆ. ಇದನ್ನು ಗಮನಿಸಿದ ಪೌರಕಾರ್ಮಿಕರು ಕಸದ ಬುಟ್ಟಿಗೆ ಹಾಕುವಂತೆ ಸೂಚಿಸಿದ್ದಾರೆ.
ಆದರೆ, ಪೌರಕಾರ್ಮಿಕನ ಈ ಮಾತಿಗೆ ಯುವತಿ ಆಕ್ರೋಶಗೊಂಡು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಅಲ್ಲದೆ, ಯುವತಿ ಕೈ ಸನ್ನೆ ಮಾಡುತ್ತಾ ವಾಗ್ವಾದ ನಡೆಸಿದ್ದಾಳೆ. ಬಳಿಕ ಏಕಾಏಕಿ ಕಲ್ಲು ತೆಗೆದು ಪೌರಕಾರ್ಮಿಕನ ಮೇಲೆ ಎಸೆದು ಹಲ್ಲೆ ನಡೆಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆ ನಡೆಸಿರುವ ಬಗ್ಗೆ ಸ್ವಚ್ಛತಾ ಸಿಬ್ಬಂದಿಯು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.




