Bengaluru | ಪೂಜೆಯ ನೆಪದಲ್ಲಿ ವೃದ್ಧೆಯ 40 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳ್ಳತನ: ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ನಕಲಿ ಜ್ಯೋತಿಷಿಯೊಬ್ಬ ಪೂಜೆಯ ನೆಪದಲ್ಲಿ ವೃದ್ಧೆಯೊಬ್ಬರಿಂದ 40 ಲಕ್ಷ ರೂ.ಮೌಲ್ಯದ ಚಿನ್ನಾಭರಣ ದೋಚಿ, ನಂತರ ತನಗೆ ಅಪಘಾತವಾಗಿದೆ ಎಂದು ಕೃತಕ ಬುದ್ಧಿಮತ್ತೆಯಿಂದ(ಎಐ)ಸೃಷ್ಟಿಸಿದ್ದ ವೀಡಿಯೋ ಕಳುಹಿಸಿ ನಾಪತ್ತೆಯಾಗಿರುವ ಘಟನೆ ನಗರದಲ್ಲಿ ನಡೆದಿದ್ದು, ಜ್ಯೋತಿಷಿ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಟರಾಯನಪುರ ನಿವಾಸಿ, 62 ವರ್ಷದ ಶಾಂತಮ್ಮ ವಂಚನೆಗೊಳಗಾದ ಮಹಿಳೆಯಾಗಿದ್ದು, ವೆಂಕಟೇಶ್ ಎಂಬ ಜ್ಯೋತಿಷಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಮೂಲತಃ ವಿಕ್ಟೋರಿಯಾ ಆಸ್ಪತ್ರೆ ಫುಟ್ಪಾತ್ನಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ವೆಂಕಟೇಶ್ಗೆ, ಅನಾರೋಗ್ಯದ ಕಾರಣ ಆಸ್ಪತ್ರೆಗೆ ಬಂದು ಹೋಗುತ್ತಿದ್ದ ಶಾಂತಮ್ಮ ಅವರ ಪರಿಚಯವಾಗಿತ್ತು. ಅವರ ಕೌಟುಂಬಿಕ ಹಾಗೂ ಆರೋಗ್ಯ ಸಮಸ್ಯೆಗಳನ್ನು ಬಂಡವಾಳ ಮಾಡಿಕೊಂಡ ವಂಚಕ, ಮನೆಗೆ ಬಂದು ಪೂಜೆ ಮಾಡುವ ನೆಪ ಹೂಡಿದ್ದ. ಕಾಕತಾಳೀಯ ಎಂಬಂತೆ ಮಹಿಳೆಗೆ ಪೂಜೆಯ ನಂತರ ಆರೋಗ್ಯ ಚೇತರಿಸಿತ್ತು. ಬಳಿಕ ಮಗನ ಕುಡಿತ ಹಾಗೂ ಮಗಳ ಮದುವೆಯ ಬಗ್ಗೆಯೂ ಕೇಳಲು ಮುಂದಾಗಿದ್ದರು.
ಮನೆಯಲ್ಲಿರುವ ಚಿನ್ನಾಭರಣಗಳಿಗೆ ಪೂಜೆ ಮಾಡಿದರೆ ದೋಷ ನಿವಾರಣೆಯಾಗುತ್ತದೆ ಎಂದು ನಂಬಿಸಿದ್ದ ವೆಂಕಟೇಶ್, ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಬಂದು ಒಡವೆಗಳನ್ನು ತೆಗೆದುಕೊಂಡು ಹೋಗುತ್ತಿದ್ದ. ಹೀಗೆ ಒಂದು ವರ್ಷದಿಂದ ಹಂತ ಹಂತವಾಗಿ ಸುಮಾರು 40 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದಾರೆ ಎಂದು ವಂಚನೆಗೊಳಗಾದ ಮಹಿಳೆ ಶಾಂತಮ್ಮ ಆರೋಪಿಸಿದ್ದಾಳೆ.
ಆ.19ರಂದು ವರಮಹಾಲಕ್ಷ್ಮೀ ಹಬ್ಬದ ಪೂಜೆಗೆ ಚಿನ್ನಾಭರಣಗಳನ್ನು ವಾಪಸ್ ನೀಡುವಂತೆ ಶಾಂತಮ್ಮ ಕೇಳಿದ್ದರು. ಇದರಿಂದ ಗಾಬರಿಗೊಂಡ ಜ್ಯೋತಿಷಿ, ತನಗೆ ಭೀಕರ ಅಪಘಾತವಾಗಿದೆ ಎಂದು ಬೇರೊಬ್ಬರಿಂದ ಕರೆ ಮಾಡಿಸಿ ನಾಟಕವಾಡಿದ್ದ. ಜೊತೆಗೆ ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿರುವಂತೆ ಎಐ ತಂತ್ರಜ್ಞಾನದಿಂದ ರಚಿಸಿದ ನಕಲಿ ವೀಡಿಯೋ ಕಳುಹಿಸಿ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿಸಲಾಗಿದೆ.
ಶಾಂತಮ್ಮ ತಮ್ಮ ಮಕ್ಕಳಿಗೆ ವೀಡಿಯೋ ತೋರಿಸಿದಾಗ, ಅದು ಎಐ ಮೂಲಕ ಸೃಷ್ಟಿಸಿದ ಫೇಕ್ ವೀಡಿಯೋ ಎಂಬುದು ಬಯಲಾಗಿದೆ. ಕೂಡಲೇ ಅವರು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ನಕಲಿ ಜ್ಯೋತಿಷಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.






