Bengaluru | ಆನ್ಲೈನ್ ಹೂಡಿಕೆ ಹೆಸರಿನಲ್ಲಿ ವಂಚನೆ ಜಾಲ ಪತ್ತೆ: ಮೂವರ ಬಂಧನ

ಸಾಂದರ್ಭಿಕ ಚಿತ್ರ | PC : Image by jcomp on Magnific
ಬೆಂಗಳೂರು : ಆನ್ಲೈನ್ ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಅಂತಾರಾಷ್ಟ್ರೀಯ ಸೈಬರ್ ವಂಚನೆ ಜಾಲವನ್ನು ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಪತ್ತೆ ಹಚ್ಚಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮೂಲದ ಅಮಿತ್ ಮಿಶ್ರಾ, ಬೆಂಗಳೂರಿನ ಜೆ.ಸಿ.ನಗರದ ತೌಸಿಫ್ ಅಹಮ್ಮದ್ ಹಾಗೂ ಜೀವನ್ ಭೀಮಾನಗರದ ಪರಶುರಾಮ್ ಸದಾನಂದ್ ಎಂಬುವರನ್ನು ಬಂಧಿಸಲಾಗಿದೆ. ಈ ಸೈಬರ್ ಆರೋಪಿಗಳ ವಿರುದ್ಧ ಮೇ ತಿಂಗಳಲ್ಲಿ ಹರೀಶ್ ಕುಮಾರ್ ಕೆ.ಎನ್. ಎಂಬುವರು ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದೂರುದಾರರನ್ನು ‘Investment Strategies Discussion' ಎಂಬ ವಾಟ್ಸಾಪ್ ಗ್ರೂಪ್ಗೆ ಸೇರಿಸಿದ್ದ ಆರೋಪಿಗಳು ‘Farallon CM' ಹೆಸರಿನಲ್ಲಿ ಡಿಮ್ಯಾಟ್ ಖಾತೆ ತೆರೆಯುವಂತೆ ಪ್ರಚೋದಿಸಿದ್ದರು. ಹೆಚ್ಚಿನ ಲಾಭದ ಆಮಿಷವೊಡ್ಡಿ, ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 93.58 ಲಕ್ಷ ರೂಪಾಯಿ ಹೂಡಿಕೆ ಮಾಡಿಸಿದ್ದರು.
ನಂತರ ಯಾವುದೇ ಲಾಭಾಂಶ ನೀಡದಿದ್ದಾಗ ಹರೀಶ್ ಕುಮಾರ್ ಅವರು ಉತ್ತರ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳಿಂದ ವಶಪಡಿಸಿಕೊಂಡ 6 ಮೊಬೈಲ್ ಫೋನ್ಗಳನ್ನು ಪರಿಶೀಲಿಸಿದಾಗ 507ಕ್ಕೂ ಹೆಚ್ಚು ಮ್ಯೂಲ್ ಅಕೌಂಟ್ಗಳು ಪತ್ತೆಯಾಗಿವೆ. ಈ ಖಾತೆಗಳನ್ನು ಹೊಸದಿಲ್ಲಿ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೈಬರ್ ಅಪರಾಧಕ್ಕೆ ಬಳಸಲಾಗಿತ್ತು. ಶ್ರೀನಿವಾಸ್ ಎಂಬುವರ ಚಾರಿಟಬಲ್ ಟ್ರಸ್ಟ್ ಗೆ ದೇಣಿಗೆ ಕೊಡುವುದಾಗಿ ನಂಬಿಸಿದ್ದ ಆರೋಪಿಗಳು ಈ ಪ್ರಸ್ತುತ ಪ್ರಕರಣದಲ್ಲಿ ವಂಚಿಸಿದ ಹಣದ ಪೈಕಿ 5 ಲಕ್ಷ ರೂ. ಜಮಾ ಮಾಡಿಸಿಕೊಂಡು ನಂತರ ಅದನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಅಕ್ರಮ ಹಣದ ವಹಿವಾಟಿಗೆ ಕ್ರಿಪ್ಟೊ ವ್ಯಾಲೆಟ್ಗಳನ್ನು ಬಳಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಐಪಿ ಮತ್ತು ಲೊಕೇಶನ್ ವಿಶ್ಲೇಷಣೆಯಿಂದ ಆರೋಪಿಗಳ ನೆಟ್ವರ್ಕ್ ಕೋಲ್ಕತ್ತಾ, ಹಾಂಗ್ಕಾಂಗ್ ಹಾಗೂ ಕ್ಯಾಫೋರ್ನಿಯಾದಲ್ಲಿ ಸಕ್ರಿಯವಾಗಿರುವುದು ಪತ್ತೆಯಾಗಿದೆ. ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಅನೂಪ್ ಯಾನೆ ಜುಲ್ಪಿ ಹಾಗೂ ಟೆಲಿಗ್ರಾಂ ಐಡಿಗಳನ್ನು ನಿರ್ವಹಿಸುತ್ತಿದ್ದ ಕಿಂಗ್ಪಿನ್ಗಳ ಬಂಧನಕ್ಕಾಗಿ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






