Bengaluru | ಎಟಿಎಂ ಹಣ ದರೋಡೆ ಪ್ರಕರಣ: ಪೊಲೀಸ್ ಠಾಣೆಗೆ ತಾನೇ ಬಂದು ಶರಣಾದ ಮತ್ತೊಬ್ಬ ಆರೋಪಿ

Photo credit: PTI
ಬೆಂಗಳೂರು: ಎಟಿಎಂಗೆ ಹಣ ತುಂಬಿಸಲು ಹೋಗುತ್ತಿದ್ದ ವಾಹನ ಅಡ್ಡಗಟ್ಟಿ 7.11 ಕೋಟಿ ರೂ. ದರೋಡೆ ಮಾಡಿದ್ದ ಪ್ರಕರಣ ಸಂಬಂಧ ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಗೆ ಬಂದು ಮತ್ತೊಬ್ಬ ಆರೋಪಿಯು ತಾನಾಗಿಯೇ ಶರಣಾಗಿದ್ದಾನೆ.
ನ.22ರ ತಡರಾತ್ರಿ ಸಿದ್ದಾಪುರ ಪೊಲೀಸ್ ಠಾಣೆಗೆ ಬಂದ ಆರೋಪಿ ರಾಕೇಶ್ ಎಂಬಾತನ್ನು ಪೊಲೀಸರು ಬಂಧಿಸಿದ್ದು, ಈತ ದರೋಡೆ ಕೃತ್ಯದ ಪ್ರಮುಖ ಆರೋಪಿ ರವಿಯ ಸಂಬಂಧಿ ಎನ್ನಲಾಗಿದೆ. ಸದ್ಯ, ಈ ಪ್ರಕರಣದಲ್ಲಿ ಈವರೆಗೆ ಒಟ್ಟು 7 ಮಂದಿಯ ಬಂಧನವಾಗಿದೆ.
ದರೋಡೆ ಮಾಡಿದ್ದ ಅರ್ಧದಷ್ಟು ಹಣವನ್ನು ಬೆಂಗಳೂರು ಹೊರವಲಯದ ಹೊಸಕೋಟೆ ಬಳಿಯ ಪಾಳು ಮನೆಯೊಂದರಲ್ಲಿ ಬಚ್ಚಿಟ್ಟು, ಖಾಲಿಯಾದ ಟ್ರಂಕ್ಗಳನ್ನು ತೆಗೆದುಕೊಂಡು ಉಳಿದ ಹಣದೊಂದಿಗೆ ನೆರೆಯ ರಾಜ್ಯವಾದ ಆಂಧ್ರಪ್ರದೇಶದ ಚಿತ್ತೂರಿಗೆ ತೆರಳಿದ್ದರು ಎಂಬುದು ಆರೋಪಿಗಳ ವಿಚಾರಣೆ ವೇಳೆ ತಿಳಿದುಬಂದಿರುವುದಾಗಿ ಗೊತ್ತಾಗಿದೆ.
ಚಿತ್ತೂರಿನ ನಿರ್ಜನ ಪ್ರದೇಶವೊಂದರಲ್ಲಿ ಉಳಿದ ಹಣವನ್ನು ಬ್ಯಾಗಿನಲ್ಲಿ ಹಾಕಿಕೊಂಡು, ಟ್ರಂಕ್ಗಳನ್ನು ಪೊದೆಯಲ್ಲಿ ಬಿಸಾಡಿ, ಸುಮಾರು 10 ಕಿ.ಮೀ. ಅಂತರದಲ್ಲಿ ಕಾರನ್ನು ನಿಲ್ಲಿಸಿ ಮತ್ತೊಂದು ಕಾರಿನಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಅನುಮಾನ ಬಾರದ ರೀತಿಯಲ್ಲಿ ಮೊಬೈಲ್ನಲ್ಲಿ ಸಾಮಾನ್ಯ ಕರೆಗಳನ್ನು ಮಾಡದೇ ವಾಟ್ಸಾಪ್ ಕರೆ ಮಾಡಿ, ಹಿಂದಿ, ಉರ್ದು, ತಮಿಳು, ತೆಲುಗು ಭಾಷೆಗಳಲ್ಲಿ ಸಂಭಾಷಣೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಎಲ್ಲರೂ ಗುಂಪುಗೂಡಿ ಒಟ್ಟಾಗಿ ಇರದೇ, ಬೇರೆ ಬೇರೆಯಾಗಿ ಒಂದು ಕಡೆ ನೆಲೆ ನಿಲ್ಲದೆ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಸುತ್ತಾಡುತ್ತಿದ್ದರು ಎಂದು ತನಿಖೆಯಲ್ಲಿ ಗೊತ್ತಾಗಿದೆ.







