Commonwealth Games 2026 | ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ರಿಚಾ ಜೋನಿತಾ ದಾಸ್ ರಿಂದ ಭರತನಾಟ್ಯ ಪ್ರದರ್ಶನ

ಬೆಂಗಳೂರು: ಗ್ಲ್ಯಾಸ್ಗೋದಲ್ಲಿ ನಡೆದ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಸಮಾರೋಪ ಸಮಾರಂಭದ ‘ಇಂಡಿಯಾ ಹ್ಯಾಂಡೋವರ್’ ಕಾರ್ಯಕ್ರಮದಲ್ಲಿ ಬೆಂಗಳೂರಿನ ಭರತನಾಟ್ಯ ಕಲಾವಿದೆ, 'ಕಲಾರ್ಪಣೆ' ಯ ಸಂಸ್ಥಾಪಕಿ ಹಾಗೂ ಕಲಾತ್ಮಕ ನಿರ್ದೇಶಕಿ ರಿಚಾ ಜೋನಿತಾ ದಾಸ್ ಭಾರತವನ್ನು ಪ್ರತಿನಿಧಿಸಿ ಭರತನಾಟ್ಯ ಪ್ರದರ್ಶನ ನೀಡಿದರು.
ಅಹಮದಾಬಾದ್‌ನಲ್ಲಿ ನಡೆಯಲಿರುವ ಶತಮಾನೋತ್ಸವದ ಕಾಮನ್‌ವೆಲ್ತ್ ಕ್ರೀಡಾಕೂಟದ ಅಂಗವಾಗಿ ಭಾರತದ ಸಾಂಸ್ಕೃತಿಕ ವೈವಿಧ್ಯವನ್ನು ಪರಿಚಯಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆಗಸ್ಟ್ 2ರಂದು ಗ್ಲ್ಯಾಸ್ಗೋದ OVO ಹೈಡ್ರೋದಲ್ಲಿ ನಡೆದ 20 ನಿಮಿಷಗಳ ‘ಇಂಡಿಯಾ ಹ್ಯಾಂಡೋವರ್’ ಕಾರ್ಯಕ್ರಮದಲ್ಲಿ ಭರತನಾಟ್ಯ, ಕುಚಿಪುಡಿ, ಕಥಕ್ ಹಾಗೂ ಭಾಂಗ್ರಾ ಸೇರಿದಂತೆ ಭಾರತದ ವಿವಿಧ ಶಾಸ್ತ್ರೀಯ ಮತ್ತು ಜಾನಪದ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಾಯಿತು. 120 ನೃತ್ಯಗಾರರ ತಂಡದಲ್ಲಿ ರಿಚಾ ಜೋನಿತಾ ದಾಸ್ ಕೂಡ ಒಬ್ಬರಾಗಿದ್ದು, ಶಿಯಾಮಕ್ ದಾವರ್ ನೃತ್ಯ ಅಕಾಡೆಮಿಯು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶನ ನೀಡಲು ಬೆಂಗಳೂರಿನಿಂದ ಆಯ್ಕೆ ಮಾಡಿದ ಇಬ್ಬರು ಭರತನಾಟ್ಯ ಕಲಾವಿದರಲ್ಲಿ ಅವರೂ ಸೇರಿದ್ದರು.
ಕಾರ್ಯಕ್ರಮವು ಮೂರು ಹಂತಗಳಲ್ಲಿ ನಡೆಯಿತು. ಮೊದಲ ಹಂತದಲ್ಲಿ ‘ವಂದೇ ಮಾತರಂ’ ಗೀತೆಯ 150 ವರ್ಷಗಳನ್ನು ಸ್ಮರಿಸುವ ನೃತ್ಯರೂಪಕವನ್ನು ನಟಿ ಹಾಗೂ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್ ಮುನ್ನಡೆಸಿದರು. ಎರಡನೇ ಹಂತದಲ್ಲಿ ಭಾರತೀಯ ಸಿತಾರ್ ವಾದಕ ರಿಷಬ್ ರಿಖಿರಾಮ್ ಶರ್ಮಾ ಮತ್ತು ಸ್ಕಾಟ್ಲೆಂಡ್‌ನ ಪೈಪರ್ ರಾಸ್ ಐನ್ಸ್ಲೀ ಅವರ ಸಂಗೀತ ಪ್ರದರ್ಶನಗೊಂಡಿತು. ಕೊನೆಯ ಹಂತದಲ್ಲಿ ಶಂಕರ್ ಮಹಾದೇವನ್, ಸಿದ್ಧಾರ್ಥ್ ಮಹಾದೇವನ್, ಶಿವಂ ಮಹಾದೇವನ್ ಹಾಗೂ ಭೂಮಿ ತ್ರಿವೇದಿ ಅವರ ಗಾಯನದೊಂದಿಗೆ ಗುಜರಾತ್ ನ ಸಾಂಸ್ಕೃತಿಕ ವೈಭವ ಅನಾವರಣಗೊಂಡಿತು.
ಈ ಕುರಿತು ಪ್ರತಿಕ್ರಿಯಿಸಿದ ರಿಚಾ ಜೋನಿತಾ ದಾಸ್, ಕಾಮನ್‌ವೆಲ್ತ್ ಕ್ರೀಡಾಕೂಟದಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಭಾರತ ಮತ್ತು ತಮ್ಮ ತವರು ಬೆಂಗಳೂರನ್ನು ಪ್ರತಿನಿಧಿಸಿರುವುದು ಜೀವನದ ಅತ್ಯಂತ ಸ್ಮರಣೀಯ ಕ್ಷಣ ಎಂದು ಹೇಳಿದರು.
‘ಭಾರತದ ವಿವಿಧ ನೃತ್ಯ ಸಂಪ್ರದಾಯಗಳನ್ನು ಪ್ರತಿನಿಧಿಸಿದ 120ಕ್ಕೂ ಹೆಚ್ಚು ಕಲಾವಿದರೊಂದಿಗೆ ವೇದಿಕೆ ಹಂಚಿಕೊಳ್ಳುವುದು ಹಾಗೂ ಭರತನಾಟ್ಯವನ್ನು ಜಾಗತಿಕ ಪ್ರೇಕ್ಷಕರಿಗೆ ಪರಿಚಯಿಸುವ ಅವಕಾಶ ದೊರೆತಿರುವುದು ಹೆಮ್ಮೆಯ ಸಂಗತಿ. ಇದು 'ಕಲಾರ್ಪಣ' ಪ್ರತಿನಿಧಿಸುವ ಕಲಾ ಪರಂಪರೆಗೆ ಸಂದ ಗೌರವವೂ ಆಗಿದೆ’ ಎಂದು ಹೇಳಿದರು.
ಪ್ರದರ್ಶನದ ವೇಳೆ ಉಂಟಾದ ಭಾವನಾತ್ಮಕ ಅನುಭವವನ್ನೂ ಅವರು ಹಂಚಿಕೊಂಡರು. ‘ಮೂರನೇ ಹಂತದಲ್ಲಿ “ಲೆಹ್ರಾ ದೋ” ಹಾಡು ಆರಂಭವಾಗುತ್ತಿದ್ದಂತೆ ಮೈ ನಡುಗಿತು. ವಿವಿಧ ದೇಶಗಳ ಕ್ರೀಡಾಪಟುಗಳ ಎದುರು ಪ್ರದರ್ಶನ ನೀಡುವುದು ಅಪರೂಪದ ಅನುಭವ. ಅವರನ್ನು ಸಮೀಪದಲ್ಲೇ ಪ್ರೇಕ್ಷಕರಾಗಿ ಕಾಣುವುದು ಮತ್ತಷ್ಟು ವಿಶೇಷವಾಗಿತ್ತು’ ಎಂದರು.
ಪ್ರದರ್ಶನದ ಸಿದ್ಧತೆ ಕುರಿತು ಮಾತನಾಡಿದ ಅವರು, ‘ಸಿದ್ಧತೆಯ ಪ್ರಕ್ರಿಯೆ ತುಂಬಾ ಆನಂದದಾಯಕವಾಗಿತ್ತು. ಶಿಯಾಮಕ್ ದಾವರ್ ಅವರ ಮಾರ್ಗದರ್ಶನದಿಂದ ಉತ್ತಮ ನಾಯಕತ್ವದ ಗುಣಗಳನ್ನು ಕಲಿಯುವ ಅವಕಾಶ ಸಿಕ್ಕಿತು. ಪ್ರದರ್ಶನ ವ್ಯವಸ್ಥಾಪಕರು ಹಾಗೂ ಬೋಧಕರಾದ ಪ್ರಶಾಂತ್ ಮತ್ತು ತೇಜಸ್ ಅವರ ಸಹಕಾರದಿಂದ ಸಿದ್ಧತೆ ಸುಗಮವಾಗಿ ನಡೆಯಿತು’ ಎಂದು ಹೇಳಿದರು.
ರಿಚಾ ಜೋನಿತಾ ದಾಸ್ ಅವರು ಬೆಂಗಳೂರು ಮೂಲದ ‘ಕಲಾರ್ಪಣೆ’ ಸಂಸ್ಥೆಯ ಸಂಸ್ಥಾಪಕಿ ಹಾಗೂ ಕಲಾತ್ಮಕ ನಿರ್ದೇಶಕರಾಗಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ನೃತ್ಯಗಾರರಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡುತ್ತಿದ್ದಾರೆ. ಗುರುಗಳಾದ ಪಾರ್ಶ್ವನಾಥ್ ಉಪಾಧ್ಯೆ, ಶ್ರುತಿ ಗೋಪಾಲ್ ಮತ್ತು ಆದಿತ್ಯ ಪಿ.ವಿ. ಅವರ ಮಾರ್ಗದರ್ಶನದಲ್ಲಿ ಉಪಾಧ್ಯೆ ನೃತ್ಯ ಶಾಲೆಯಲ್ಲಿ 15 ವರ್ಷಗಳಿಗೂ ಹೆಚ್ಚು ಕಾಲ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ.
ಪುರುಷರ ಹಾಕಿ ವಿಶ್ವಕಪ್ ಉದ್ಘಾಟನಾ ಸಮಾರಂಭ, ಇಟಲಿಯ ಸಾಂಸ್ಕೃತಿಕ ಪ್ರವಾಸ ಸೇರಿದಂತೆ ಭಾರತ ಮತ್ತು ವಿದೇಶಗಳ ಹಲವು ವೇದಿಕೆಗಳಲ್ಲಿ ಅವರು ಪ್ರದರ್ಶನ ನೀಡಿದ್ದಾರೆ. 2021–22ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವಿದ್ಯಾರ್ಥಿವೇತನಕ್ಕೂ ಅವರು ಭಾಜನರಾಗಿದ್ದಾರೆ.






