Bengaluru | ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಸಂದೇಶ: ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ಟೇಕಾಫ್ಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಸಂದೇಶ ಕಂಡು ಬಂದ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ವರದಿಯಾಗಿದೆ.
ಜುಲೈ 16 ರಂದು ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಹೊರಡಬೇಕಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ. ಸಂಜೆ 7.35 ರ ಸುಮಾರಿಗೆ ಬಾಂಬ್ ಬೆದರಿಕೆಯ ಸಂದೇಶದ ಕೈಬರಹ ಪತ್ತೆಯಾಯಿತು.
ಜು.16ರ ಗುರುವಾರ ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಅಹಮದಾಬಾದ್ಗೆ ಹೊರಡಬೇಕಿದ್ದ 6E-6423 ಇಂಡಿಗೋ ವಿಮಾನದಲ್ಲಿ ಸಂಜೆ 7.30ರ ಸುಮಾರಿಗೆ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿದೆ. ಈ ಪತ್ರದಲ್ಲಿ ‘ಬಾಂಬ್ ಇದೆ ಹೋಗಬೇಡಿ’ ಎಂದು ಕೈಬರಹದಲ್ಲಿ ಬರೆದು ವಿಮಾನದ ಕ್ರೀವ್ ಲ್ಯಾವೆಟರಿನಲ್ಲಿ ಇರಿಸಲಾಗಿದೆ.
ಬಾಂಬ್ ಬೆದರಿಕೆಯ ಸಂದೇಶ ಕಂಡು ಬಂದ ಹಿನ್ನೆಲೆ ತಕ್ಷಣವೇ ಪ್ರಯಾಣಿಕರನ್ನು ಕೆಳಗಡೆ ಇಳಿಸಿದ ಭದ್ರತಾ ಸಿಬ್ಬಂದಿ ವಿಮಾನವನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ, ಯಾವುದೇ ಸ್ಫೋಟಕ ಸಂಬಂಧಿತ ವಸ್ತುಗಳು ಪತ್ತೆಯಾಗದ ಹಿನ್ನೆಲೆ ಇದೊಂದು ಹುಸಿ ಬಾಂಬ್ ಸಂದೇಶ ಎಂದು ದೃಢಪಟ್ಟಿದೆ.
ಬಾಂಬ್ ಬೆದರಿಕೆ ಪತ್ರ ಬರೆದಿಟ್ಟವನ ವಿರುದ್ಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಇಂಡಿಗೋ ಸಂಸ್ಥೆಯಿಂದ ದೂರು ದಾಖಲಾಗಿದೆ. ಈ ಕುರಿತು ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.






