Bengaluru | ಕಾಲ್ಸೆಂಟರ್ ಉದ್ಯೋಗಿಗಳ ಅಪಹರಿಸಿ ಹಣಕ್ಕೆ ಬೇಡಿಕೆ ಆರೋಪ: ಕಾನ್ಸ್ಟೇಬಲ್ ಸಹಿತ 8 ಮಂದಿ ಸೆರೆ

ಸಾಂದರ್ಭಿಕ ಚಿತ್ರ
ಬೆಂಗಳೂರು: ಕಾಲ್ ಸೆಂಟರ್ ಉದ್ಯೋಗಿಗಳನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಆರೋಪದಡಿ ಕಾನ್ಸ್ಟೇಬಲ್ ಸಹಿತ 8 ಆರೋಪಿಗಳನ್ನು ಇಲ್ಲಿನ ಕೋರಮಂಗಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಚಲಪತಿ, ಭರತ್, ಪವನ್, ಪ್ರಸನ್ನ, ಅತೀಕ್, ಜಬೀವುಲ್ಲಾ ಸೇರಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಈ ಆರೋಪಿಗಳ ಪೈಕಿ ಚಲಪತಿ ಕೋಲಾರ ಜಿಲ್ಲೆಯ ಹೆಡ್ ಕಾನ್ಸ್ಟೇಬಲ್ ಎಂಬುದು ತನಿಖೆ ಸಂದರ್ಭದಲ್ಲಿ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ಸಂಬಂಧ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಮಾತನಾಡಿ, ನ.22ರ ಶನಿವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಕೋರಮಂಗಲದಲ್ಲಿರುವ ಗ್ಲೋಬಲ್ ಕನೆಕ್ಟ್ ಟೆಲಿಕಾಂ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಾಲ್ಸೆಂಟರ್ ಬಳಿ ತೆರಳಿದ್ದ ಆರೋಪಿಗಳು, ತಾವು ಪೊಲೀಸರು ಎಂದು ಉದ್ಯೋಗಿಗಳನ್ನು ಬೆದರಿಸಿದ್ದರು. ಬಳಿಕ ಪವನ್, ರಾಜ್ವೀರ್, ಆಕಾಶ್, ಅನಸ್ ಎಂಬ ನಾಲ್ವರನ್ನು ಅಪಹರಿಸಿ ಕರೆದೊಯ್ದಿದ್ದರು.
ನಂತರ 25 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟು, ಕಂಪೆನಿಯ ಆಪರೇಷನಲ್ ಮ್ಯಾನೇಜರ್ ಖಾತೆಯಿಂದ 18 ಲಕ್ಷ ರೂ. ವರ್ಗಾಯಿಸಿಕೊಂಡಿದ್ದರು. ಬಳಿಕ ನ.22ರ ಶನಿವಾರ ಮುಂಜಾನೆ 4 ಗಂಟೆಗೆ ಕಾಲ್ ಸೆಂಟರ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ನ.22ರ ಶನಿವಾರ ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಹೊಸಕೋಟೆಯ ಲಾಡ್ಜ್ ನಲ್ಲಿ ಆರೋಪಿಗಳಿರುವುದನ್ನು ಪತ್ತೆ ಹಚ್ಚಿ ಅಪಹರಣಕ್ಕೊಳಪಟ್ಟವರನ್ನು ರಕ್ಷಿಸಿದ್ದಾರೆ. ಈ ಪ್ರಕರಣ ಸಂಬಂಧ 8 ಆರೋಪಿಗಳನ್ನು ಬಂಧಿಸಲಾಗಿದ್ದು, 2 ಕಾರು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಪೊಲೀಸರು ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿದ್ದ ಪ್ರಕರಣವನ್ನೇ ಬಂಡವಾಳ ಮಾಡಿಕೊಂಡು ಆರೋಪಿತರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.







