Bengaluru | ಎಸ್‍ಐಆರ್ ಪ್ರಕ್ರಿಯೆ ಬಗ್ಗೆ ನಿರ್ಲಕ್ಷ್ಯ ಬೇಡ: ಮುಸ್ಲಿಂ ಸಮುದಾಯಕ್ಕೆ ಉಲಮಾಗಳ ಆಗ್ರಹ

ಬೆಂಗಳೂರು: ಭಾರತೀಯ ಚುನಾವಣಾ ಆಯೋಗವು ರಾಜ್ಯದಲ್ಲಿ ಜೂ.30ರಿಂದ ಜು.29ರ ವರೆಗೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಸಲಿದ್ದು, ಮುಸ್ಲಿಮರು ತಮ್ಮ ಮತದಾನದ ಹಕ್ಕನ್ನು ಕಾಪಾಡಿಕೊಳ್ಳಬೇಕಾದ್ದು ಅತಿ ಮುಖ್ಯವಾಗಿದೆ. ಆದುದರಿಂದ, ಯಾವುದೆ ಕಾರಣಕ್ಕೂ ಎಸ್‍ಐಆರ್ ಕುರಿತು ನಿರ್ಲಕ್ಷ್ಯ ವಹಿಸದಂತೆ ಉಲಮಾಗಳು ಆಗ್ರಹಿಸಿದ್ದಾರೆ.
ಸೋಮವಾರ ನಗರದ ಖಾದ್ರಿಯಾ ಮಸೀದಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮದ್ರಸಾ ಇಸ್ಲಾಹುಲ್ ಬನಾತ್ ಮುಖ್ಯಸ್ಥ ಮೌಲಾನಾ ಸೈಯದ್ ಶಬ್ಬೀರ್ ಅಹ್ಮದ್ ಹುಸೇನಿ ನದ್ವಿ, ಚುನಾವಣಾ ಮತದಾರರ ಪಟ್ಟಿಯಲ್ಲಿ ಪಾರದರ್ಶಕತೆ ತರುವುದು, ನಕಲಿ ಮತದಾರರು, ಮೃತಪಟ್ಟವರ ಹೆಸರುಗಳನ್ನು ಕೈ ಬಿಡುವುದು, ಹೊಸ ಮತದಾರರ ಸೇರ್ಪಡೆ ಈ ಪ್ರಕ್ರಿಯೆ ಭಾಗವಾಗಿದೆ. ಈ ಹಿಂದೆ 2002ರಲ್ಲಿ ಚುನಾವಣಾ ಆಯೋಗವು ಎಸ್‍ಐಆರ್ ನಡೆಸಿತ್ತು ಎಂದು ಹೇಳಿದರು.
ಸರಕಾರದಿಂದ ನೇಮಿಸಲ್ಪಟ್ಟ ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‍ಒ) ಜೂ.30 ರಿಂದ ಜು.29ರ ನಡುವೆ ಮನೆ ಮನೆಗೆ ಭೇಟಿ ನೀಡಿ, ಮತದಾರರ ಪಟ್ಟಿಯಲ್ಲಿರುವ ಮತದಾರನ ಮಾಹಿತಿಯನ್ನು ಒಳಗೊಂಡ ಎರಡು ನಮೂನೆಗಳನ್ನು ತಮ್ಮೊಂದಿಗೆ ತರುತ್ತಾರೆ, ಅದನ್ನು ಮತದಾರರು ಅಗತ್ಯ ಮಾಹಿತಿಯೊಂದಿಗೆ ಭರ್ತಿ ಮಾಡಿ ಹಿಂದಿರುಗಿಸಿದ ಬಳಿಕ, ಬಿಎಲ್‍ಒ ಒಂದು ಪ್ರತಿಯನ್ನು ಮತದಾರರಿಗೆ ನೀಡುತ್ತಾರೆ ಎಂದು ಶಬ್ಬೀರ್ ಅಹ್ಮದ್ ನದ್ವಿ ತಿಳಿಸಿದರು.
ಮತದಾರರ ಪಟ್ಟಿಯಲ್ಲಿರುವ ಭಾವಚಿತ್ರ ಬದಲಾಯಿಸಲು ಅವಕಾಶ ಕಲ್ಪಿಸಿದ್ದು, ಮತದಾರನು ಬಿಎಲ್‍ಒಗೆ ಹಿಂದಿರುಗಿಸುವ ನಮೂನೆಯೊಂದಿಗೆ ಹೊಸ ಭಾವಚಿತ್ರ ಅಂಟಿಸಿ ಕೊಡಬೇಕು. ಚುನಾವಣಾ ಆಯೋಗ ನಿಗದಿಪಡಿಸಿರುವ 11 ದಾಖಲೆಗಳ ಪೈಕಿ ಬಿಎಲ್‍ಒ ಕೇಳುವಂತಹ ದಾಖಲೆಯನ್ನು ಅವರಿಗೆ ತೋರಿಸಬೇಕು ಎಂದು ಅವರು ಹೇಳಿದರು.
ಪ್ರತಿಯೊಬ್ಬ ವ್ಯಕ್ತಿಯು ತನ್ನ ಮತ್ತು ತನ್ನ ಕುಟುಂಬದ ಸದಸ್ಯರ ಹೆಸರುಗಳು ಮತದಾರರ ಪಟ್ಟಿಯಿಂದ ಕೈ ಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕು. ಅಲ್ಲದೆ, ತನ್ನ ನೆರೆಹೊರೆಯಲ್ಲಿರುವ ಬೇರೆ ಧರ್ಮೀಯರ ಸಹೋದರ, ಸಹೋದರಿಯರಿಗೂ ನೆರವು ನೀಡಬೇಕು ಎಂದು ಅವರು ಕರೆ ನೀಡಿದರು.
ಎಸ್‍ಐಆರ್ ಬಗ್ಗೆ ನಾವು ಮಾಡುವ ಒಂದು ಸಣ್ಣ ನಿರ್ಲಕ್ಷ್ಯ ನಮ್ಮ ಭವಿಷ್ಯ ಹಾಗೂ ಮುಂದಿನ ಪೀಳಿಗೆಯ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರಬಹುದು ಎಂದು ಶಬ್ಬೀರ್ ಅಹ್ಮದ್ ನದ್ವಿ ಎಚ್ಚರಿಸಿದರು.
ಜಾಮಿಯಾ ಇಸ್ಲಾಮಿಯ ಮಸಿಹುಲ್ ಉಲೂಮ್ ಮುಖ್ಯಸ್ಥ ಮುಫ್ತಿ ಶುಐಬ್ ಉಲ್ಲಾ ಖಾನ್ ಮಿಫ್ತಾಯಿ ಮಾತನಾಡಿ, ಮಸೀದಿಗಳ ಆಡಳಿತ ಸಮಿತಿಗಳು, ಸಾಮಾಜಿಕ ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಸಂಘ ಸಂಸ್ಥೆಗಳು ಎಲ್ಲರೂ ಜೊತೆ ಸೇರಿ ಎಸ್‍ಐಆರ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಮಸೀದಿಗಳ ಆವರಣದಲ್ಲಿ ಒಂದು ಸಹಾಯ ಕೇಂದ್ರವನ್ನು ಸ್ಥಾಪಿಸಿ, ಅಲ್ಲಿ ಎಸ್‍ಐಆರ್ ಗೆ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿ ಕೊಡುವಲ್ಲಿ ಜನಸಾಮಾನ್ಯರಿಗೆ ಸಹಾಯ ಮಾಡಬೇಕು ಎಂದು ಹೇಳಿದರು.
ಜಮೀಯತ್ ಉಲಮಾ ಹಿಂದ್ ರಾಜ್ಯಾಧ್ಯಕ್ಷ ಮುಫ್ತಿ ಇಫ್ತಿಕಾರ್ ಅಹ್ಮದ್ ಖಾಸ್ಮಿ ಮಾತನಾಡಿ, ದೇಶದಲ್ಲಿ ಇದಕ್ಕೂ ಮುನ್ನವು ಎಸ್‍ಐಆರ್ ನಡೆದಿದೆ. ಆದರೆ, ಹಿಂದಿನ ಸರಕಾರಗಳು ಜನರಿಗೆ ಅವರ ಹಕ್ಕುಗಳನ್ನು ಸುರಕ್ಷಿತಗೊಳಿಸುವ ದೃಷ್ಟಿಯಿಂದ ಎಸ್‍ಐಆರ್ ನಡೆಸಿದ್ದವು. ಈಗಿರುವ ಸರಕಾರ ನಿರ್ದಿಷ್ಟವಾಗಿ ಒಂದು ಸಮುದಾಯವನ್ನು ಮತದಾನದ ಹಕ್ಕಿನಿಂದ ವಿಮುಖಗೊಳಿಸುವ ದುರುದ್ದೇಶದಿಂದ ಇದನ್ನು ನಡೆಸುತ್ತಿದೆ ಎಂದು ದೂರಿದರು.
ಸಿಎಎ ಹಾಗೂ ಎನ್‍ಆರ್‌ಸಿ ವಿರುದ್ಧದ ಹೋರಾಟದ ಸಂದರ್ಭದಿಂದಲೂ ದಾಖಲೆಗಳನ್ನು ಸಮರ್ಪಕಗೊಳಿಸಿಕೊಳ್ಳುವಂತೆ ಕರೆ ನೀಡುತ್ತಲೆ ಬಂದಿದ್ದೇವೆ. ಆದರೂ, ಇನ್ನೂ ಬಹುತೇಕ ಮಂದಿ ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಎಸ್‍ಐಆರ್ ನಲ್ಲಿ ಮತದಾನದ ಹಕ್ಕು ಕಳೆದುಕೊಂಡರೆ ನಮ್ಮ ಪೌರತ್ವವು ಅಪಾಯಕ್ಕೆ ಸಿಲುಕಲಿದೆ ಎಂಬುದನ್ನು ಯಾರೊಬ್ಬರೂ ಮರೆಯಬಾರದು ಎಂದು ಅವರು ಹೇಳಿದರು.
ಎಸ್‍ಐಆರ್ ಪ್ರಕ್ರಿಯೆಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕು. ನಾವು ನಮ್ಮ ವ್ಯಾಪಾರ, ಉದ್ಯೋಗದಿಂದ ಎರಡು ಅಥವಾ ಮೂರು ದಿನ ರಜೆ ತೆಗೆದುಕೊಂಡಾದರೂ ನಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು. ಈಗ ಎಚ್ಚೆತ್ತುಕೊಂಡು ನಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳದಿದ್ದರೆ ನಾವು ದೇಶದ ಪ್ರಜೆಯಾಗಿಯೂ ಉಳಿಯಲು ಸಾಧ್ಯವಿಲ್ಲ, ಸರಕಾರದ ಯಾವ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಇಫ್ತಿಕಾರ್ ಅಹ್ಮದ್ ಖಾಸ್ಮಿ ಹೇಳಿದರು.
ಜಮೀಯತ್ ಉಲಮಾ ಹಿಂದ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಫ್ತಿ ಶಂಸುದ್ದೀನ್ ಬಜಲಿ ಖಾಸ್ಮಿ ಮಾತನಾಡಿ, 2026ರಲ್ಲಿ ನಾವು 2002ರಲ್ಲಿನ ಮತದಾರರ ಪಟ್ಟಿಯಲ್ಲಿ ನಮ್ಮ ಹಾಗೂ ನಮ್ಮ ಪೋಷಕರ ಹೆಸರುಗಳನ್ನು ಹುಡುಕುತ್ತಿದ್ದೇವೆ. ಅದೇ ರೀತಿ, ಭವಿಷ್ಯದಲ್ಲಿ ನಮ್ಮ ಮಕ್ಕಳು ನಮ್ಮ ಹೆಸರುಗಳನ್ನು ಹುಡುಕುವಂತಹ ಪರಿಸ್ಥಿತಿ ಬರಬಹುದು. ಮುಂದಿನ ಪೀಳಿಗೆ ನಮ್ಮ ದೂಷಿಸುವಂತಾಗಬಾರದು. ಆದುದರಿಂದ, ಎಸ್‍ಐಆರ್ ಗೆ ಸಂಬಂಧಿಸಿದಂತೆ ಅತ್ಯಂತ ಎಚ್ಚರಿಕೆ ಹಾಗೂ ಜಾಗರೂಕವಾಗಿರಬೇಕು ಎಂದು ಕಿವಿ ಮಾತು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರಿನ ಜಾಮಿಯಾ ತಲ್ಹಾ ಫಾರೂಕಿಯಾ ಮುಖ್ಯಸ್ಥ ಹಾಫಿಝ್ ಸೈಯದ್ ಆಸಿಮ್ ಅಬ್ದುಲ್ಲಾ, ಮೌಲಾನಾ ಅಬ್ದುಲ್ ಖಾದರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.






