Bengaluru | ಔಷಧಿ ಸರಬರಾಜು ಮಾಡಲು ಟೆಂಡರ್ ಕೊಡಿಸುವುದಾಗಿ ವಂಚನೆ ಪ್ರಕರಣ: ನಕಲಿ ಐಎಎಸ್ ಅಧಿಕಾರಿಯ ಬಂಧನ

ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಔಷಧಿ ಸರಬರಾಜು ಮಾಡಲು ಸರಕಾರದಿಂದ ಟೆಂಡರ್ ಕೊಡಿಸುವುದಾಗಿ ನಂಬಿಸಿ ಮೆಡಿಕಲ್ ಶಾಪ್ ಮಾಲಕನಿಂದ 41 ಲಕ್ಷ ರೂ. ಹಣ ಪಡೆದು ವಂಚಿಸಿದ ಆರೋಪದಡಿ ನಕಲಿ ಐಎಎಸ್ ಅಧಿಕಾರಿಯನ್ನು ಇಲ್ಲಿನ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಿಥುನ್(28) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿನ ನಿವಾಸಿಯಾಗಿರುವ ದೂರುದಾರ ಸತೀಶ್ ಎಂಬವರಿಗೆ 41 ಲಕ್ಷ ರೂ. ಹಣ ವಂಚಿಸಿದ ಆರೋಪದಡಿ ಈತನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಕಡೂರು ಮೂಲದವನಾಗಿದ್ದು, ಈ ಹಿಂದೆ ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ. ಇದೇ ಅಧಾರದ ಮೇರೆಗೆ ಸ್ನೇಹಿತರ ಬಳಿ ತಾನು ಐಎಎಸ್ ಅಧಿಕಾರಿಯಾಗಿ ನೇಮಕವಾಗಿದ್ದು, ಪ್ರೊಬೆಷನರಿ ತರಬೇತಿಯಲ್ಲಿದ್ದೇನೆ ಎಂದು ನಂಬಿಸಿದ್ದ. ಅಲ್ಲದೆ, ನಗರದ ಆರೋಗ್ಯಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದ್ದ. ಚಿಕ್ಕಮಗಳೂರಿನ ಮಲ್ಲೇಗೌಡ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಚಂದ್ರಶೇಖರ್ ಅವರನ್ನು ಪರಿಚಯಿಸಿಕೊಂಡು ವೈದ್ಯರು ಹಾಗೂ ಸಿಬ್ಬಂದಿಯೊಂದಿಗೆ ಸಭೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಆರೋಗ್ಯ ಇಲಾಖೆಯ ಚಿಕ್ಕಮಗಳೂರಿನ ಉಸ್ತುವಾರಿಯಾಗಿದ್ದೇನೆ ಎಂದು ಹೇಳಿದ್ದ ಸುಳ್ಳನ್ನೇ ನಂಬಿದ್ದ ಡಾ.ಚಂದ್ರಶೇಖರ್, ಮೂರು ತಿಂಗಳ ಹಿಂದೆ ದೂರುದಾರ ಸತೀಶ್ ಅವರಿಗೆ ಈತನನ್ನು ಪರಿಚಯಿಸಿದ್ದರು. ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದ ಸತೀಶ್ ಬಳಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಔಷಧಿ ಸರಬರಾಜು ಮಾಡಲು ಸರಕಾರಿ ಆದೇಶ ಕೊಡಿಸುವ ಬಗ್ಗೆ ತಿಳಿಸಿದ್ದರು. ಇದನ್ನು ನಂಬಿದ ಸತೀಶ್, ಆರೋಪಿಯನ್ನು ಸಂಪರ್ಕಿಸಿದಾಗ 1.8 ಕೋಟಿ ರೂ.ವರೆಗೂ ಔಷಧಿ ಸರಬರಾಜು ಮಾಡಲು ಆದೇಶ ಕೊಡಿಸುತ್ತೇನೆ. ಇದಕ್ಕೆ ಪ್ರತಿಯಾಗಿ ಶೇ.20ರಷ್ಟು ಮುಂಗಡವಾಗಿ ಕಮಿಷನ್ ನೀಡಬೇಕೆಂದು ಹೇಳಿದ್ದ. ಇದರಂತೆ ಜಕ್ಕೂರು ಬಳಿ 36 ಲಕ್ಷ ರೂ. ಹಣ ವಸೂಲಿ ಮಾಡಿದ್ದ. ಎರಡು ವಾರಗಳ ಬಳಿಕ ಈ ಬಗ್ಗೆ ಪ್ರಶ್ನಿಸಿದಾಗ ಹೆಚ್ಚುವರಿಯಾಗಿ 5 ಲಕ್ಷ ರೂ. ನೀಡುವಂತೆ ಕೇಳಿ ಪಡೆದಿದ್ದ. ಅಲ್ಲದೆ, ಆದೇಶ ಕೊಡಿಸಲು 2 ತಿಂಗಳು ಆಗಲಿದೆ ಎಂದು ಸುಳ್ಳು ಹೇಳಿದ್ದ. ಈ ಬಗ್ಗೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಮಿಥುನ್ ಹೆಸರಿನಲ್ಲಿ ಐಎಎಸ್ ಅಧಿಕಾರಿ ಇಲ್ಲದಿರುವುದು ಗೊತ್ತಾಗಿದೆ. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೆÇಲೀಸರು ಮಾಹಿತಿ ನೀಡಿದ್ದಾರೆ.
ದೂರುದಾರನಿಗೆ ಆರೋಪಿಯನ್ನು ಪರಿಚಯಿಸಿದ್ದ ಚಿಕ್ಕಮಗಳೂರಿನ ಸರಕಾರಿ ಆಸ್ಪತ್ರೆಯ ಸರ್ಜನ್ ಡಾ.ಚಂದ್ರಶೇಖರ್ ಅವರಿಗೆ ವಂಚನೆ ಕೃತ್ಯದಲ್ಲಿನ ಪಾತ್ರದ ಬಗ್ಗೆ ಅರಿಯಲು ವಿಚಾರಣೆಯ ಅಗತ್ಯತೆ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






