ಡಿ.4ರಿಂದ 13ರವರೆಗೆ ‘ಬೆಂಗಳೂರು ಜಾತ್ರೆ’ | 200ಕ್ಕೂ ಅಧಿಕ ಕಾರ್ಯಕ್ರಮಗಳು, 20 ಕೋಟಿ ರೂ.ಖರ್ಚು: ಸಚಿವ ಕೃಷ್ಣ ಬೈರೇಗೌಡ
ʼಇಡೀ ಬೆಂಗಳೂರನ್ನೇ ಸಾಂಸ್ಕೃತಿಕ ವೇದಿಕೆಯನ್ನಾಗಿಸುವ ಗುರಿʼ

ಸಚಿವ ಕೃಷ್ಣ ಬೈರೇಗೌಡ (File Photo)
ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಇದೆ. ಆ ಪರಂಪರೆಯನ್ನು ಬಲಪಡಿಸುವ ಹಾಗೂ ಎಲ್ಲರಿಗೂ ಬದುಕು ಕಟ್ಟಿಕೊಟ್ಟಿರುವ ಇಡೀ ನಗರವನ್ನು ಒಂದು ದೊಡ್ಡ ಊರಿನಂತೆ ಕಂಡು ಜನರೆಲ್ಲರೂ ಒಟ್ಟಾಗಿ ಸಂಭ್ರಮಿಸುವ ಉದ್ದೇಶದಿಂದ ‘ಬೆಂಗಳೂರು ಜಾತ್ರೆ’ ಹೆಸರಿನಲ್ಲಿ ಬೆಂಗಳೂರು ಊರಹಬ್ಬವನ್ನು ಡಿ.4ರಿಂದ 13ರ ವರೆಗೆ ಆಯೋಜಿಸಲಾಗುತ್ತಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ನಗರದ ಬೆಳವಣಿಗೆಗೆ ತಕ್ಕಂತೆ ಜನರ ಜೀವನದ ಗುಣಮಟ್ಟವೂ ಸುಧಾರಿಸಬೇಕು. ಜೀವನದ ಗುಣಮಟ್ಟ ಕೇವಲ ಮೂಲಸೌಕರ್ಯಕ್ಕೆ ಸೀಮಿತವಲ್ಲ; ಕಲೆ, ಸಾಹಿತ್ಯ, ಸಂಸ್ಕೃತಿ, ಹವ್ಯಾಸಗಳು ಮತ್ತು ಸಾರ್ವಜನಿಕ ಚಟುವಟಿಕೆಗಳೂ ವ್ಯಕ್ತಿಯ ಜೀವನವನ್ನು ಸಮಗ್ರವಾಗಿಸುತ್ತವೆ. 2023ರಲ್ಲೇ ಮೂಡಿದ ಈ ಆಲೋಚನೆಯನ್ನು ಈ ವರ್ಷ ಅನುಷ್ಠಾನಗೊಳಿಸಲು ಸಿಎಂ ಡಿ.ಕೆ.ಶಿವಕುಮಾರ್ ಆಶಯದಂತೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಬೆಂಗಳೂರು ಜಾತ್ರೆ ಕೇವಲ ಸರಕಾರದ ಕಾರ್ಯಕ್ರಮವಾಗಿರದೆ, ಸಾರ್ವಜನಿಕರು, ಸಂಘ-ಸಂಸ್ಥೆಗಳು, ಕಲಾವಿದರು ಮತ್ತು ವಿವಿಧ ಸಮುದಾಯಗಳೇ ಭಾಗಿಯಾಗುವ ಜನಹಬ್ಬವಾಗಬೇಕು ಎಂಬುದು ಮುಖ್ಯ ಉದ್ದೇಶವಾಗಿದೆ. ಹಿಂದೆ ಸುಮಾರು 300 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿದ್ದ ಬೆಂಗಳೂರು ಇಂದು ಸುಮಾರು 750 ಚದರ ಕಿಲೋಮೀಟರ್ ಗೆ ವಿಸ್ತರಿಸಿದೆ. ಇದಕ್ಕೆ ಅನುಗುಣವಾಗಿ ನಗರದ ವಿವಿಧ ಪಾಲಿಕೆಗಳು, ರಸ್ತೆಗಳು, ಉದ್ಯಾನವನಗಳು, ಸಭಾಂಗಣಗಳು, ಕಾಲೇಜು ಮೈದಾನಗಳು, ಮಾಲ್ಗಳು, ಟೆಕ್ ಪಾರ್ಕ್ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ವಿಕೇಂದ್ರೀಕೃತವಾಗಿ ನಡೆಸಲಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪೊಲೀಸ್ ಇಲಾಖೆ, ಬೆಸ್ಕಾಂ, ಬಿಡಬ್ಲ್ಯೂಎಸ್ಎಸ್ಬಿ, ಬೆಂಗಳೂರು ಮೆಟ್ರೋ ಸೇರಿದಂತೆ ವಿವಿಧ ಸರಕಾರಿ ಸಂಸ್ಥೆಗಳು, ಖಾಸಗಿ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು, ವಸ್ತುಸಂಗ್ರಹಾಲಯಗಳು ಹಾಗೂ ನಾಗರಿಕ ಸಂಘಟನೆಗಳ ಸಹಯೋಗದಲ್ಲಿ ಹಬ್ಬ ಜರುಗಲಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಡಿ.4ರಂದು ಸಂಜೆ 4ಗಂಟೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರು ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಹಳೆಯ ಬೆಂಗಳೂರಿನ ಪ್ರಮುಖ ಗುರುತುಗಳಲ್ಲೊಂದಾದ ಬ್ರಿಗೇಡ್ ರಸ್ತೆ ಮತ್ತು ಎಂ.ಜಿ.ರಸ್ತೆಯ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ಸಾಂಸ್ಕೃತಿಕ ವೇದಿಕೆಯನ್ನಾಗಿ ರೂಪಿಸಲಾಗುವುದು. ಸಂಚಾರ ಕಡಿಮೆ ಇರುವ ಎಂ.ಜಿ.ರಸ್ತೆ ಮತ್ತು ಕಬ್ಬನ್ ರಸ್ತೆ ನಡುವಿನ ಕಾಮರಾಜ ರಸ್ತೆ ಸಂಪರ್ಕ ರಸ್ತೆಯಲ್ಲಿ ವೇದಿಕೆ ನಿರ್ಮಿಸಲಾಗಿದ್ದು ರಾಜ್ಯದ ವಿವಿಧ ಭಾಗಗಳಿಂದ 500 ಜನಪದ ಕಲಾವಿದರು 20 ಕಲಾತಂಡಗಳೊಂದಿಗೆ ಆಗಮಿಸಿ ಕರ್ನಾಟಕದ ಬಹುಸಂಸ್ಕೃತಿಯನ್ನು ಪ್ರದರ್ಶಿಸುವ ಮೆರವಣಿಗೆ ನಡೆಸಲಿದ್ದಾರೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಮೆಜೆಸ್ಟಿಕ್ ಸಮೀಪದ ಫ್ರೀಡಂ ಪಾರ್ಕ್ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳ ಮೇಳ ಮತ್ತು ಆಹಾರ ಮೇಳ ಆಯೋಜಿಸಲಾಗುವುದು. ಬೆಂಗಳೂರು ಕೇಂದ್ರ ಭಾಗದ ಜೊತೆಗೆ ಉಳಿದ ನಾಲ್ಕು ಪಾಲಿಕೆಗಳಲ್ಲಿಯೂ ಮೂರು-ನಾಲ್ಕು ದಿನಗಳ ಕಾಲ ಸ್ಥಳೀಯ ಮೈದಾನಗಳಲ್ಲಿ ಶಾಸ್ತ್ರೀಯ, ಜನಪದ ಮತ್ತು ಆಧುನಿಕ ನೃತ್ಯ, ಸಂಗೀತ ಹಾಗೂ ಸಾಹಿತ್ಯ ಕಾರ್ಯಕ್ರಮಗಳು ನಡೆಯಲಿವೆ. ಪಶ್ಚಿಮ ಭಾಗದಲ್ಲಿ ರಾಮಮಂದಿರ ಮೈದಾನ, ದಕ್ಷಿಣದಲ್ಲಿ ಶಾಲಿನಿ ಮೈದಾನ ಹಾಗೂ ಪೂರ್ವದಲ್ಲಿ ಐಟಿಐ ಮೈದಾನ ಸೇರಿದಂತೆ ವಿವಿಧೆಡೆ ವೇದಿಕೆಗಳನ್ನು ರೂಪಿಸಲಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಹಿಂದೆ ಪ್ರಸಿದ್ಧವಾಗಿದ್ದ ಬೆಂಗಳೂರು ಪುಸ್ತಕ ಮೇಳವನ್ನು ಬೆಂಗಳೂರು ಜಾತ್ರೆಯಲ್ಲಿ ಪುನರಾರಂಭಿಸಲಾಗುತ್ತಿದೆ. ಡಿಸೆಂಬರ್ 11, 12 ಮತ್ತು 13ರಂದು ಪುಸ್ತಕ ಮೇಳ ಆಯೋಜಿಸಲು ಉದ್ದೇಶಿಸಲಾಗಿದ್ದು, ಶೀಘ್ರವೇ ಸ್ಥಳವನ್ನು ನಿಗದಿಪಡಿಸಲಾಗುವುದು. ಇದರ ಜೊತೆಗೆ, ಫೋರ್ಟ್ ಹೈ ಸ್ಕೂಲ್ ಮೈದಾನದಲ್ಲಿ ಕೆಂಪೇಗೌಡರು ರೂಪಿಸಿದ ಬೆಂಗಳೂರಿನ ಮೂಲ ಪರಿಕಲ್ಪನೆ ಮತ್ತು ಹಳೆಯ ಕುಲಕಸುಬುಗಳನ್ನು ಪರಿಚಯಿಸುವ ಮಾದರಿಯನ್ನು ನಿರ್ಮಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 9 ದಿನಗಳ ನಿರಂತರ ಕಾರ್ಯಕ್ರಮಗಳು ನಡೆಯಲಿವೆ. ಇಂಡಿಯನ್ ಮ್ಯೂಸಿಕ್ ಅಕಾಡೆಮಿ, ರಂಗಶಂಕರ, ಬೆಂಗಳೂರು ಇಂಟನ್ರ್ಯಾಷನಲ್ ಸೆಂಟರ್, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಸೇರಿದಂತೆ ಹಲವು ಸಂಸ್ಥೆಗಳು ಕೈಜೋಡಿಸಿವೆ. ಆರ್ವಿ ಟ್ರಸ್ಟ್, ಬಿಎಂಎಸ್ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜು, ಕ್ರೈಸ್ಟ್ ವಿಶ್ವವಿದ್ಯಾಲಯ, ರಾಮಯ್ಯ ಕಾಲೇಜು, ಜೆಡಿ ಇನ್ಟ್ಸಿಟ್ಯೂಟ್ ಆಫ್ ಫ್ಯಾಷನ್ ಅಂಡ್ ಡಿಸೈನ್, ಕ್ರೈಸ್ಟ್ ಜಯಂತಿ ಮತ್ತು ಎನ್ಎಂಕೆಆರ್ವಿ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ. ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷಿಕರು ಹಾಗೂ ದೇವಾಂಗ, ತಿಗಳ, ಮಡಿವಾಳ ಮುಂತಾದ ಸಮುದಾಯಗಳು ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸಲು ಬೆಂಗಳೂರು ಜಾತ್ರೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಶಿವಾಜಿನಗರದ ರಸೆಲ್ ಮಾರುಕಟ್ಟೆ ಸಮೀಪದ ಚೌಕದಲ್ಲಿ ವೈವಿಧ್ಯತೆಯ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ ದೊಡ್ಡ ಗಣೇಶ, ಹಲಸೂರು, ಅಣ್ಣಮ್ಮ, ಚಾಮುಂಡಿ ಬೆಟ್ಟ, ದೊಡ್ಡ ಬಸವಣ್ಣ ದೇವಸ್ಥಾನಗಳು, ಹಳೆಯ ಚರ್ಚ್ಗಳು, ಮಸೀದಿಗಳು, ಬೆಂಗಳೂರು ಕಡಲೆಕಾಯಿ ಪರಿಷೆ ಮತ್ತು ಬೆಂಗಳೂರು ಲಿಟರೇಚರ್ ಫೆಸ್ಟಿವಲ್ಗಳನ್ನೂ ಸಂಯೋಜಿಸುವ ಪ್ರಯತ್ನ ನಡೆದಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಫೋರಂ, ಫೀನಿಕ್ಸ್ ಮಾಲ್ಗಳು, ಮಾನ್ಯತಾ, ಪ್ರೆಸ್ಟೀಜ್ ಟೆಕ್ ಪಾರ್ಕ್ಗಳು ಹಾಗೂ ಇನ್ಫೋಸಿಸ್ ಆವರಣಗಳಲ್ಲಿ ಕಾರ್ಯಕ್ರಮಗಳು ಜರುಗಲಿವೆ. ‘ಅನ್ಬಾಕ್ಸಿಂಗ್ ಬೆಂಗಳೂರು’ ವತಿಯಿಂದ ಸುಮಾರು 50 ಉದ್ಯಾನಗಳಲ್ಲಿ ಸಣ್ಣ ಅವಧಿಯ ಕಾರ್ಯಕ್ರಮಗಳು ನಡೆಯಲಿವೆ. ಮೆಟ್ರೋ ನಿಲ್ದಾಣಗಳು ಮತ್ತು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲೂ ನೋಂದಾಯಿತ ಉದಯೋನ್ಮುಖ ಮತ್ತು ಹವ್ಯಾಸಿ ಕಲಾವಿದರಿಗೆ ಅವಕಾಶ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ವಿವಿಧ ಸ್ಥಳಗಳಲ್ಲಿ ಬೆಂಗಳೂರಿನ ಆಹಾರ ಸಂಸ್ಕøತಿಯನ್ನು ಬಿಂಬಿಸುವ ಆಹಾರ ಮೇಳಗಳು ನಡೆಯಲಿವೆ. ಯುವಜನರಿಗೆ ಬೆಂಗಳೂರಿನ ಇತಿಹಾಸ ಮತ್ತು ಐತಿಹಾಸಿಕ ಸ್ಥಳಗಳನ್ನು ಪರಿಚಯಿಸಲು ಆನ್ಲೈನ್ ನೋಂದಣಿ ಮೂಲಕ ಐತಿಹಾಸಿಕ ಮತ್ತು ಪ್ರಾಮುಖ್ಯತೆ ಇರುವ ಸ್ಥಳಗಳಿಗೆ ಖುದ್ದು ಭೇಟಿ ಮಾಡುವ ‘ಬೆಂಗಳೂರು ಟ್ರೆಷರ್ ಹಂಟ್’ ಆಯೋಜಿಸಲಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
200ಕ್ಕೂ ಹೆಚ್ಚು ಕಾರ್ಯಕ್ರಮಗಳು:
ಜಿಬಿಎ ವತಿಯಿಂದ ಸುಮಾರು 50 ಪ್ರಮುಖ ಕಾರ್ಯಕ್ರಮಗಳು ಸೇರಿದಂತೆ ಖಾಸಗಿ ಸಂಸ್ಥೆಗಳು ಮತ್ತು ಸಂಘಟನೆಗಳಿಂದ ಒಟ್ಟು 200ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯುವ ನಿರೀಕ್ಷೆಯಿದೆ. ಕಾರ್ಯಕ್ರಮಗಳ ಆಯೋಜನೆಗೆ ಪ್ರಸ್ತುತ ಸುಮಾರು 20 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ (ಸ್ವಲ್ಪ ಹೆಚ್ಚಳವಾಗುವ ಸಾಧ್ಯತೆಯೂ ಇದೆ). ಹೆಚ್ಚಿನ ಮೊತ್ತ ಕಲಾವಿದರು ಮತ್ತು ಕಾರ್ಯಕ್ರಮಗಳ ಆಯೋಜನೆಗೆ ಬಳಕೆಯಾಗಲಿದೆ. ಅಗತ್ಯವಿರುವ ಸಂಸ್ಥೆಗಳಿಗೆ ವೇದಿಕೆ, ಧ್ವನಿ-ಬೆಳಕಿನ ವ್ಯವಸ್ಥೆಯಂತಹ ಕನಿಷ್ಠ ಮೂಲಸೌಕರ್ಯ ನೆರವನ್ನು ಸರಕಾರ ನೀಡಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಮಾಣಿಕ್ ಷಾ ಮೈದಾನದಲ್ಲಿ ಸಮಾರೋಪ:
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಡಿ.13ರಂದು ಸಂಜೆ ಸಮಾರೋಪ ಸಮಾರಂಭ ಜರುಗಲಿದ್ದು, ಕನ್ನಡ ಕಲಾವಿದ ಸಂಜಿತ್ ಹೆಗ್ಡೆ ಹಾಗೂ ಕಲಾವಿದೆ ಸುನಿಧಿ ಚೌಹಾಣ್ ಪಾಲ್ಗೊಳ್ಳಲಿದ್ದಾರೆ. ಮಾಣಿಕ್ ಷಾ ಮೈದಾನದಲ್ಲಿ ಸೇನಾ ಅಧಿಕಾರಿಗಳ ಷರತ್ತು ಮತ್ತು ಭದ್ರತಾ ನಿಯಮಗಳಿಗೆ ಅನುಗುಣವಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಇಲ್ಲಿ ಪ್ರವೇಶ ಉಚಿತವಾಗಿದ್ದರೂ, ಜನಸಂದಣಿ ನಿಯಂತ್ರಣಕ್ಕಾಗಿ ಪೂರ್ವ ನೋಂದಣಿ ಮತ್ತು ಕ್ಯೂಆರ್ ಕೋಡ್ ವ್ಯವಸ್ಥೆ ಕಡ್ಡಾಯವಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಅಧಿವೇಶನದ ನಡುವೆಯೂ ಜಾತ್ರೆ ಏಕೆ?:
ಸಂಚಾರ ದಟ್ಟಣೆ ಸಮಸ್ಯೆ ಮತ್ತು ಚಳಿಗಾಲದ ಅಧಿವೇಶನದ ನಡುವೆಯೂ ಬೆಂಗಳೂರು ಜಾತ್ರೆ ಬೇಕೆ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ, ಕಾರ್ಯಕ್ರಮಗಳ ವಿಕೇಂದ್ರೀಕರಣದಿಂದಾಗಿ ಜನಸಂದಣಿ ಮತ್ತು ಸಂಚಾರ ನಿಯಂತ್ರಣ ಸುಲಭವಾಗಲಿದೆ. ಪೊಲೀಸ್ ಇಲಾಖೆಯೊಂದಿಗೆ ಪರ್ಯಾಯ ಸಂಚಾರ ವ್ಯವಸ್ಥೆ ರೂಪಿಸಿ ಮುಂಚಿತವಾಗಿ ಮಾಹಿತಿ ನೀಡಲಾಗುವುದು. ಬೆಳಗಾವಿ ಅಧಿವೇಶನ ನಡೆಯುವ ಸಂದರ್ಭದಲ್ಲೂ ಜಿಬಿಎ, ಪೊಲೀಸ್ ಮತ್ತು ಕನ್ನಡ-ಸಂಸ್ಕೃತಿ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ, ಪಾಲಿಕೆ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕಾರ್ಯಕ್ರಮಗಳನ್ನು ಸುಗಮವಾಗಿ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಡಿಸೆಂಬರ್ ನಲ್ಲಿ ಜಿಬಿಎ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಜೊತೆಗೆ ಡಿಸೆಂಬರ್ನಲ್ಲಿ ರಜಾ ವಾತಾವರಣ, ಕುಟುಂಬಗಳ ಭಾಗವಹಿಸುವಿಕೆ ಮತ್ತು ಪ್ರವಾಸಿಗರ ಆಕರ್ಷಣೆಗೆ ಪೂರಕವಾಗಿರುವುದರಿಂದ ಈ ತಿಂಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕೃಷ್ಣ ಬೈರೇಗೌಡ ಉತ್ತರಿಸಿದರು.






