Bengaluru| ಕೃಷಿ ಮೇಳದಲ್ಲಿ 54.16 ಲಕ್ಷ ಜನರು ಭಾಗಿ, 4.77ಕೋಟಿ ರೂ. ವಹಿವಾಟು

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ನ.13ರಿಂದ 16ರ ವರೆಗೆ ನಡೆದ ಕೃಷಿ ಮೇಳದಲ್ಲಿ ಸುಮಾರು 54.16 ಲಕ್ಷ ಜನರು ಭಾಗಿಯಾಗಿದ್ದು, 4.77 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಹಿವಾಟನ್ನು ನಡೆಸುವ ಮೂಲಕ ಸಮಾರೋಪಗೊಂಡಿದೆ.
ನಾಲ್ಕು ದಿನಗಳ ಕಾಲ ನಡೆದ ಕೃಷಿ ಮೇಳವು ಬೆಂಗಳೂರು ಮತ್ತು ರಾಜ್ಯದ ವಿವಿಧ ಭಾಗದ ರೈತರು ಮತ್ತು ಕೃಷಿಯ ಬಗ್ಗೆ ತಿಳಿದುಕೊಳ್ಳುವ ಆಸಕ್ತ ಜನರಿಗೆ ಸಹಕಾರಿಯಾಗಿದ್ದು, ಕೃಷಿ ಯಂತ್ರೋಪಕರಣ, ಬೀಜೋತ್ಪನ್ನ, ತಳಿ, ಸಾವಯವ ರಸಗೊಬ್ಬರ, ವಿವಿಧ ಪ್ರಾಣಿ, ಪಕ್ಷಿಗಳ ಪ್ರದರ್ಶನಗಳು ಸಾರ್ವಜನಿಕರ ಗಮನ ಸೆಳೆದವು.
ಬೀಜೋತ್ಪಾದನೆಗೆ ಹೆಸರುವಾಸಿಯಾದ ಸುವರ್ಣ ಟಗರು, ಶ್ರೀಕೃಷ್ಣ ಗೋಶಾಲಾ ಹಾಗೂ ಇನ್ನಿತರೆ ಗೋಶಾಲೆಗಳ ಪ್ರದರ್ಶನದಲ್ಲಿದ್ದ ಹಳ್ಳಿಕಾರ್, ಓಂಗಲ್, ಬದ್ರಿ, ಕೊಂಬು ಇಲ್ಲದ ರಾಠಿ ಸೇರಿದಂತೆ ಅನೇಕ ವಿಶಿಷ್ಟ ತಳಿಗಳನ್ನು ನೋಡಲು ಸಾರ್ವಜನಿಕರು ಮುಗಿ ಬಿದ್ದಿದ್ದರು.
ಬಗೆ ಬಗೆಯ ಆಹಾರ ಮಳಿಗೆಗಳು, ಕೃಷಿ ಉತ್ಪನ್ನ ಮಳಿಗೆ, ಸಾವಯವ ಆಹಾರ ಮಳಿಗೆಗಳಲ್ಲಿ ಸಾಲು ಸಾಲು ಜನರು ಭೇಟಿ ನೀಡಿ ತಮಗೆ ಬೇಕಾದ ವಸ್ತುವನ್ನು ಖರೀದಿಸುವುದು ಮತ್ತು ಮಾಹಿತಿ ಪಡೆಯವ ಕೆಲಸ ಜೋರಾಗಿ ನಡೆಯಿತು.
ಲಾಲ್‍ಬಾಗ್‍ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನವನ್ನು ಮಾದರಿಯನ್ನಾಗಿಟ್ಟುಕೊಂಡು ಕೃಷಿ ಮೇಳದಲ್ಲಿಯೂ ಫಲಪುಷ್ಪ ಪ್ರದರ್ಶನ ಮಾಡಿದ್ದು, ಹೂವು ಎಲೆಗಳಿಂದ ಮಾಡಿದ್ದ ಟ್ರ್ಯಾಕ್ಟರ್, ಮೀನು, ಕುರಿ, ಅನಾನಸ್, ಬಾಳೆ ಹಣ್ಣು, ವಿವಿಧ ಧಾನ್ಯಗಳಿಂದ ಮಾಡಿದ್ದ ಕರ್ನಾಟಕದ ನಕ್ಷೆ ಆಕರ್ಷಣೀಯವಾಗಿದ್ದು, ಅವುಗಳ ಮುಂದೆ ನಿಂತು ಸಾರ್ವಜನಿಕರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಗಮನ ಸೆಳೆದ ಕೀಟ ಪ್ರಪಂಚ: ಪ್ರಕೃತಿಯಲ್ಲಿನ ಜೇನು, ಚಿಟ್ಟೆಗಳು, ಮಳೆ ಹುಳು, ಕವಲು ತೋಕೆ ಚಿಟ್ಟೆಗಳು, ಸಗಣಿ ಉಂಡೆ, ರಸ ಹೀರುವ ಪತಂಗ, ಸ್ಪಿಂಗಿಡ್ ಪತಂಗ, ಮಲಬಾರ್ ಚಿಟ್ಟೆಗಳು, ಜಲಚರ ಕೀಟಗಳು ಹಾಗೂ ರೇಷ್ಮೆ ಬೆಳೆಯುವ ಹಂತಗಳ ಪ್ರದರ್ಶನ, ಕೀಟಗಳಲ್ಲಿ ಮಾಡಬಹುದಾದ ವಿವಿಧ ಬಗೆ ಬಗೆಯ ಖಾದ್ಯಗಳ ಪರಿಚಯ ನೋಡಿ ಜನರು ದಂಗಾದರು.
ಬಾಧಿಸಿದ ನೆಟ್‍ವರ್ಕ್ ಸಮಸ್ಯೆ: ಕೃಷಿ ಮೇಳದ ಕೊನೆಯ ದಿನದಂದು ಸುಮಾರು 15 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿರುವುದರಿಂದ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಎದುರಾಯಿತು. ನೆಟ್‍ವರ್ಕ್ ಸಮಸ್ಯೆಯ ಕಾರಣದಿಂದ ಮಳಿಗೆಗಳಲ್ಲಿ ಆಗಬೇಕಿದ್ದ ಆನ್‍ಲೈನ್ ವಹಿವಾಟು ಕಡಿಮೆಯಾಯಿತು. ಅನೇಕ ಮಳಿಗೆಗಳ ಮಾಲಕರು ಆನ್‍ಲೈನ್ ಪೇಮೆಂಟ್‍ಗಳಿಗೆ ಅವಕಾಶ ನೀಡದೇ ಬರೀ ನಗದು ಮಾತ್ರ ಅವಕಾಶ ನೀಡಿರುವುದು ಕಂಡು ಬಂದಿತು.
4 ದಿನಗಳ ಒಟ್ಟು ವಹಿವಾಟು: ಮೊದಲ ದಿನ (ನ.13) 8.51 ಲಕ್ಷ ಜನ ಭಾಗವಹಿಸಿದ್ದು 0.62ಕೋಟಿ ರೂ.ವಹಿವಾಟು, 2ನೇ ದಿನ 11.85ಲಕ್ಷ ಜನ ಭಾಗವಹಿಸಿದ್ದು 1.8ಕೋಟಿ ರೂ.ವಹಿವಾಟು, 3ನೇ ದಿನ 15.87ಲಕ್ಷ ಜನರು ಭಾಗವಹಿಸಿದ್ದು 1.62ಕೋಟಿ ರೂ. ವಹಿವಾಟು, 4ನೇ ದಿನ 17.93ಲಕ್ಷ ಜನರು ಭಾಗವಹಿಸಿ 1.45ಕೋಟಿ ರೂ. ವಹಿವಾಟು, ಒಟ್ಟು 54.16ಲಕ್ಷ ಜನರು ಭಾಗವಹಿಸಿದ್ದು, 4.77ಕೋಟಿ ರೂ. ವಹಿವಾಟು ಆಗಿದೆ ಎಂದು ಕೃಷಿ ವಿವಿ ತಿಳಿಸಿದೆ







