Bengaluru | ಕೌಟುಂಬಿಕ ಕಲಹ: ಗರ್ಭಿಣಿ ಪತ್ನಿಯ ಹತ್ಯೆಗೈದು ಪತಿಯೂ ಆತ್ಮಹತ್ಯೆ!

ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಗರ್ಭಿಣಿ ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆಗೈದ ಪತಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ವರದಿಯಾಗಿದೆ.
ಸ್ವಪ್ನಾ (28) ಹತ್ಯೆಯಾದ ಗರ್ಭಿಣಿ. ಪತ್ನಿಯ ಹತ್ಯೆಗೈದು ಮನೋಜ್ ಆತ್ಮಹತ್ಯೆ ಮಾಡಿಕೊಂಡ ಪತಿ ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶ ಮೂಲದ ಈ ಇಬ್ಬರೂ ಹಲವು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದರು. ಮನೋಜ್ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದರೆ, ಪತ್ನಿ ಸ್ವಪ್ನಾ ಗೃಹಿಣಿಯಾಗಿದ್ದರು. ನಾಲ್ಕು ದಿನಗಳಿಂದ ಕೆಲಸಕ್ಕೆ ಹೋಗದೆ ಮನೋಜ್ ಮನೆಯಲ್ಲಿದ್ದ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿ ಮಧ್ಯೆ ಸಣ್ಣಪುಟ್ಟ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಗುರುವಾರ ಮಧ್ಯಾಹ್ನ ದಂಪತಿ ನಡುವೆ ಮತ್ತೆ ಜಗಳ ನಡೆದು ವಿಕೋಪಕ್ಕೆ ಹೋಗಿದೆ. ಈ ವೇಳೆ ಮನೆಯಲ್ಲಿದ್ದ ನಾಯಿಯ ಕುತ್ತಿಗೆಗೆ ಹಾಕುವ ನೈಲಾನ್ ಹಗ್ಗದಿಂದ ಪತ್ನಿಯ ಕುತ್ತಿಗೆಯನ್ನು ಬಿಗಿದು ಹತ್ಯೆ ಮಾಡಿದ್ದಾನೆ. ಬಳಿಕ ಅದೇ ಹಗ್ಗದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಅಕ್ಕಪಕ್ಕದ ಮನೆಯವರು ವಿಷಯ ತಿಳಿಸಿದ ನಂತರ ಸ್ಥಳಕ್ಕೆ ದೌಡಾಯಿಸಿದ ಸಿ.ಕೆ.ಅಚ್ಚುಕಟ್ಟು ಠಾಣಾ ಪೊಲೀಸರು, ಪರಿಶೀಲನೆ ನಡೆಸಿ ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದಕ್ಷಿಣ ವಿಭಾಗದ ಡಿಸಿಪಿ ವಂಶಿಕೃಷ್ಣ, ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಪತಿ-ಪತ್ನಿ ಬಾಗಿಲು ಹಾಕಿಕೊಂಡು ಜಗಳ ಮಾಡಿಕೊಂಡಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದು ಪರಿಶೀಲಿಸಲಾಗಿದೆ. ನಾಯಿಗೆ ಹಾಕುವ ಹಗ್ಗದಿಂದ ಪತ್ನಿಯ ಕುತ್ತಿಗೆ ಬಿಗಿದು ಹತ್ಯೆ ಮಾಡಿರುವ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾದರೆ, ಫ್ಯಾನಿಗೆ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಮನೋಜ್ ಎಂಬವನ ಮೃತದೇಹ ದೊರೆತಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.






